ರಾಮನಗರ: "ಜೆಡಿಎಸ್ ಹೋರಾಟದ ಹಿನ್ನೆಲೆಯಲ್ಲಿ ಬೆಳೆದು ಬಂದ ಪಕ್ಷ. ಅದನ್ನು ಉಳಿಸಿಕೊಳ್ಳಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಪಕ್ಷ ಬಯಸಿದರೆ, ಕಾರ್ಯಕರ್ತರು ತೀರ್ಮಾನ ಮಾಡಿದರೆ ನಾನೇ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ" ಎಂದು ರಾಮನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿ ಅಚ್ಚರಿ ಮೂಡಿಸಿದರು.
ನಗರದಲ್ಲಿಂದು ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, "ಅನಿತಾ ಕುಮಾರಸ್ವಾಮಿ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಬೆಳಿಗ್ಗೆಯೂ ಮನೆಯಲ್ಲಿ ಚರ್ಚೆ ನಡೆಯಿತು. ಅವರು ಈಗಾಗಲೇ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ನೀತಿ ಸಂಹಿತೆ ಜಾರಿಯಾಗುವುದಕ್ಕಿಂತ ಮುಂಚೆ ಕ್ಷೇತ್ರದಲ್ಲಿನ ಕೆಲಸಗಳನ್ನು ಸಂಪೂರ್ಣವಾಗಿ ಮುಗಿಸಿದ್ದು, ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ" ಎಂದು ಹೇಳಿದರು.
‘"ನನ್ನ ತಾಯಿ ಈ ಹಿಂದೆ ಮಧುಗಿರಿ, ಚನ್ನಪಟ್ಟಣ ಹಾಗೂ ರಾಮನಗರದಲ್ಲಿ ಅನಿವಾರ್ಯವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಕಳೆದ ಬಾರಿ ಉಪ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧೆಗೆ ನನಗೂ ಒತ್ತಡ ಇತ್ತು. ನಾನು ಆಗ ಸಿನಿಮಾದಲ್ಲಿ ಬ್ಯುಸಿ ಆಗಿದ್ದೆ. ಹೀಗಾಗಿ ಅವರು ಅನಿವಾರ್ಯವಾಗಿ ಸ್ಪರ್ಧಿಸಿ ಗೆದ್ದರು. ಅದಕ್ಕೆ ತಕ್ಕಂತೆ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ" ಎಂದರು.
ಹಾಸನ ಕ್ಷೇತ್ರದ ಟಿಕೆಟ್ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿ, "ಎಲ್ಲ ಪಕ್ಷಗಳಲ್ಲಿಯೂ ಒಂದಿಷ್ಟು ಗೊಂದಲಗಳಿರುತ್ತವೆ. ಪ್ರಜಾಪ್ರಭುತ್ವದಲ್ಲಿ ಜನಸೇವೆ ಮಾಡಲು ರಾಜಕಾರಣ ಒಂದು ವೇದಿಕೆ. ಪ್ರತಿಯೊಬ್ಬರಿಗೂ ಚುನಾವಣೆಯಲ್ಲಿ ಭಾಗವಹಿಸಬೇಕು, ಜನಸೇವೆ ಮಾಡಬೇಕು ಎಂಬ ಆಸೆ ಇರುತ್ತದೆ. ಈ ವಿಚಾರದಲ್ಲಿ ದೇವೇಗೌಡರ ತೀರ್ಮಾನವೇ ಅಂತಿಮ" ಎಂದು ಹೇಳಿದರು.
"ಜೆಡಿಎಸ್ ಪಕ್ಷವನ್ನು ಕಾರ್ಯಕರ್ತರು ಕಟ್ಟಿ ಬೆಳೆಸಿದ್ದಾರೆ. ಕಾರ್ಯಕರ್ತರೇ ನಮಗೆ ಜೀವಾಳ. ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಹಗಲಿರುಳು ಕುಮಾರಸ್ವಾಮಿ ಶ್ರಮಿಸುತ್ತಿದ್ದಾರೆ. ಪಕ್ಷ ಬೇಡ ಅಂದರೆ ನಾನೂ ಕೂಡ ಸ್ಪರ್ಧೆ ಮಾಡುವುದಿಲ್ಲ" ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಅನಿತಾ ಕುಮಾರಸ್ವಾಮಿ ಟ್ವೀಟ್: ಚುನಾವಣೆ ಕಣದಿಂದ ಹಿಂದೆ ಸರಿದು ಪಕ್ಷದ ಶ್ರಯೋಭಿವೃದ್ಧಿ ಹಾಗೂ ನನ್ನ ಕ್ಷೇತ್ರದ ಜನರ ಒಳಿತಿಗಾಗಿ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ಯಾರೂ ಇಂಥ ವದಂತಿಗಳನ್ನು ಹಬ್ಬಿಸಬಾರದು. ಎರಡೂ ಉಪ ಚುನಾವಣೆಗಳಲ್ಲಿ ಪಕ್ಷದ ಆದೇಶವನ್ನಷ್ಟೇ ಪಾಲಿಸಿ ನಡೆದಿದ್ದೇನೆಯೇ ಹೊರತು, ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರು ಕಟ್ಟಿದ ಈ ಪಕ್ಷಕ್ಕೆ ಧಕ್ಕೆ ತರುವ ಅಥವಾ ಕುಟುಂಬದ ಗೌರವಕ್ಕೆ ಚ್ಯುತಿಯುಂಟು ಮಾಡುವ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲ. ದಯಮಾಡಿ ನನ್ನ ಭಾವನೆಗಳನ್ನು ಗೌರವಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಟ್ವೀಟ್ ಮೂಲಕ ಅನಿತಾ ಕುಮಾರಸ್ವಾಮಿ ತಿಳಿಸಿದ್ದಾರೆ.
ಇದನ್ನೂ ಓದಿ: ಕಗ್ಗಂಟಾದ ಬೆಳಗಾವಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ: ಬಂಡಾಯದ ಬಿಪಿ ಶುಗರ್ ಕಂಟ್ರೋಲ್ ಮಾಡಿ ಪಟ್ಟಿ ಸಿದ್ಧವೆಂದ ಸಿ ಟಿ ರವಿ