ರಾಮನಗರ: ಹೆಂಡತಿಯ ನಡತೆಯ ಮೇಲೆ ಸಂಶಯ ಪಟ್ಟ ಗಂಡ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಯಲವಳ್ಳಿ ಗ್ರಾಮದಲ್ಲಿ ಜರುಗಿದ್ದು, ಪೋಷಕರ ತಪ್ಪಿನಿಂದಾಗಿ ಎರಡೂವರೆ ವರ್ಷದ ಮಗು ಅನಾಥವಾಗಿದೆ.
ಕುಸುಮಾ ಮೃತ ದುರ್ದೈವಿ. ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಕುಸುಮಾ ಲಾರಿ ಚಾಲಕ ಲೋಕೇಶ್ ಎಂಬುವನನ್ನ ಪ್ರೀತಿಸಿ 2017ರಲ್ಲಿ ಮದುವೆಯಾಗಿದ್ದಳು. ಇಬ್ಬರಿಗೂ ಮುದ್ದಾದ ಎರಡೂವರೆ ವರ್ಷದ ಗಂಡು ಮಗು ಕೂಡ ಜನಿಸಿತ್ತು. ಸುಂದರ ಸಂಸಾರದಲ್ಲಿ ಲೋಕೇಶ್ ತಲೆಯಲ್ಲಿ ಅನುಮಾನ ಎಂಬ ಭೂತ ಹರಿದಾಡತೊಡಗಿತ್ತು. ಇದರಿಂದ ನಿತ್ಯ ಇಬ್ಬರು ಜಗಳವಾಡುತ್ತಿದ್ದರು ಎನ್ನಲಾಗಿದೆ.
ನಾಪತ್ತೆ ಕಥೆ ಕಟ್ಟಿದ್ದ ಪತಿ
ಅಲ್ಲದೇ, ಮದುವೆ ಸಮಯದಲ್ಲಿ ಕುಸುಮಾ ತನ್ನ ಜಾತಿ ಮುಚ್ಚಿಟ್ಟು ವಿವಾಹವಾಗಿದ್ದಳಂತೆ. ಇದು ಕೂಡಾ ಲೋಕೇಶ್ ಸಿಟ್ಟಿಗೆ ಕಾರಣವಾಗಿತ್ತು. ಜೂನ್ 3 ರಂದು ದಂಪತಿ ನಡುವೆ ಜಗಳ ಶುರುವಾಗಿತ್ತು. ಅಂದು ಲೋಕೇಶ್ ಕುಸುಮಾಳ ಕೆನ್ನೆಗೆ ಹೊಡೆದು, ಕತ್ತು ಹಿಸುಕಿ ಕೊಲೆ ಮಾಡಿ ಮೂಟೆಕಟ್ಟಿ ಆಕೆಯ ಮೃತದೇಹವನ್ನು ತನ್ನ ಜಮೀನಿನಲ್ಲಿಯೇ ಹೂತು ಹಾಕಿದ್ದ. ನಂತರ ಏನೂ ನಡೆದೇ ಇಲ್ಲ ಎನ್ನುವ ಹಾಗೆ ಸಾತನೂರು ಪೊಲೀಸ್ ಠಾಣೆಗೆ ತೆರಳಿ ಕುಸುಮಾ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದ.
ಮೊಬೈಲ್ ನೀಡಿದ ಸುಳಿವು
ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರಿಗೆ ಲೋಕೇಶ್ ಮೇಲೆ ಸಾಕಷ್ಟು ಅನುಮಾನವಿತ್ತು. ಹೀಗಾಗಿ ಅವನ ಮೊಬೈಲ್ ಕರೆಗಳನ್ನು ಪರಿಶೀಲನೆ ಮಾಡಿದ್ದಾರೆ. ನಂತರ ಠಾಣೆಗೆ ಕರೆಸಿ ತಮ್ಮದೆ ಶೈಲಿಯಲ್ಲಿ ವಿಚಾರಿಸಿದಾಗ ಅಸಲಿಯತ್ತು ಬಯಲಿಗೆ ಬಂದಿದೆ. ರಾಮನಗರ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಮೃತ ದೇಹವನ್ನ ಹೊರ ತೆಗೆಯಲಾಗಿದ್ದು, ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ನೋಡಿ ಇಡೀ ಗ್ರಾಮಸ್ಥರು ಮತ್ತು ಕುಟುಂಬಸ್ಥರು ಬೆಚ್ಚಿ ಬಿದ್ದಿದ್ದಾರೆ.
ಒಟ್ಟಾರೆ ಪ್ರೀತಿಸಿ ಮದುವೆಯಾದ ಜೋಡಿ ಅನುಮಾನದ ಹಗ್ಗಕ್ಕೆ ತಮ್ಮ ಜೀವನವನ್ನೆ ಬಲಿ ಕೊಟ್ಟಿದ್ದು ವಿಪರ್ಯಾಸ. ತಂದೆ ತಾಯಿ ಜೊತೆ ನಗುತ್ತಾ ಇರಬೇಕಾದ ಮಗು ಪೋಷಕರ ಅಗಲಿಕೆಯಿಂದ ಅನಾಥವಾಗಿದ್ದು, ನಿಜಕ್ಕೂ ಬೇಸರದ ಸಂಗತಿ.