ರಾಮನಗರ: ಬೊಂಬೆನಗರಿ ಚನ್ನಪಟ್ಟಣ ತಾಲೂಕಿನ ವಿವಿಧೆಡೆ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಯಿಂದ ಜನತೆ ತತ್ತರಿಸಿ ಹೋಗಿದ್ದಾರೆ. ನಗರ ಹಾಗೂ ಗ್ರಾಮೀಣ ಭಾಗದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಹಿನ್ನೆಲೆ ನೂರಾರು ಕುಟುಂಬಗಳು ಬೀದಿಗೆ ಬಂದಿವೆ.
ಹಾನಿಗೊಳಗಾದ ಪ್ರದೇಶಗಳಿಗೆ ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈಗಾಗಲೇ ಅಧಿಕಾರಿಗಳ ಬಳಿ ಮಾಹಿತಿ ಪಡೆದಿರುವ ಸಿಪಿವೈ, ತಕ್ಷಣವೇ ನಿರಾಶ್ರಿತ ಕೇಂದ್ರ ಸೇರಿದಂತೆ ಪರಿಹಾರ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಧಾರಾಕಾರವಾಗಿ ಸುರಿದ ಮಳೆಯಿಂದ ನಗರದ ಪೇಟೆಚೇರಿ ಶೇರ್ವ ಸರ್ಕಲ್, ಬೀಡಿ ಕಾರ್ಮಿಕರ ಕಾಲೋನಿ, ಹೊಂಗನೂರು ಕೆರೆ ಕೋಡಿ ಒಡೆದಿರುವುದು, ಮಂಗಳವಾರಪೇಟೆ ಮರಳುಹೊಲ, ತಿಟ್ಟಮಾರನಹಳ್ಳಿ, ಚಕ್ಕೆರೆ, ಕೋಲೂರು ಗಾಂಧಿ ಗ್ರಾಮ ಸೇರಿದಂತೆ ಹಲವು ಕಡೆಗಳಲ್ಲಿ ಮಳೆಯಿಂದ ತೀವ್ರ ಹಾನಿಗೊಳಗಾಗಿದೆ.
ಇದನ್ನೂ ಓದಿ: ದೇಶದ ಉತ್ತರ, ಪೂರ್ವ ರಾಜ್ಯಗಳಲ್ಲಿ ವರುಣಾರ್ಭಟಕ್ಕೆ 22 ಸಾವು: 5 ದಿನ ಜೋರು ಮಳೆ ಮುನ್ಸೂಚನೆ
ಬೆಂಗಳೂರು ಮೈಸೂರು ನೂತನ ಸರ್ವೀಸ್ ರಸ್ತೆ ಸರಿಯಿಲ್ಲ: ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮೈಸೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತಿಟ್ಟಮಾನಹಳ್ಳಿ, ಕೋಲೂರ್ ಗೇಟ್ ಹಾಗೂ ಬಸವನಪುರ ಬಳಿ ಅಂಡರ್ ಪಾಸ್ ಬಳಿ ನೀರು ನಿಂತ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಹೆದ್ದಾರಿ ನಿರ್ಮಾಣ ವೇಳೆ ಸ್ವಾಭಾವಿಕ ಹಳ್ಳ ( ನ್ಯಾಚುರಲ್ ವ್ಯಾಲಿ) ಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅವೈಜ್ಞಾನಿಕವಾಗಿ ಮುಚ್ಚಿರುವ ಪರಿಣಾಮ ಮಳೆ ನೀರು ನೇರವಾಗಿ ಅಂಡರ್ಪಾಸ್ಗೆ ಬರುವಂತೆ ಕಾಮಗಾರಿ ನಿರ್ಮಾಣ ಮಾಡಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಕಳಪೆ ಸರ್ವೀಸ್ ರಸ್ತೆಯಿಂದ ಬೆಂಗಳೂರು ಮೈಸೂರು ರಸ್ತೆಯ ಕರಾಳ ರೂಪ ಬಯಲಾಗಿದಂತಾಗಿದ್ದು, ಮುಂದಿನ ದಿನಗಳಲ್ಲಿ ಭಾರಿ ತೊಂದರೆಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ವರುಣನ ಆರ್ಭಟ : 937 ಜನರ ಸಾವು, ತುರ್ತು ಪರಿಸ್ಥಿತಿ ಘೋಷಿಸಿದ ಸರ್ಕಾರ
ಇದಲ್ಲದೇ, ಹೆದ್ದಾರಿ ಹಾದು ಹೋಗುವ ರಸ್ತೆಯ ಅಂಡರ್ ಪಾಸ್ಗಳಾದ ತಿಟ್ಟಮಾರನಹಳ್ಳಿ, ಮತ್ತಿಕೆರೆ ಶೆಟ್ಟಿಹಳ್ಳಿ, ಶೇಷಗಿರಿಹಳ್ಳಿ, ತಮ್ಮಣ್ಣನದೊಡ್ಡಿ, ಕೆಂಪನಹಳ್ಳಿ, ದ್ಯಾವರಸೇಗೌಡನದೊಡ್ಡಿ ಹಾಗೂ ಬಿಳಗುಂಬ ಅಂಡರ್ ಪಾಸ್ಗಳಲ್ಲೂ ಇದೇ ಅವ್ಯವಸ್ಥೆಯಾಗಿದೆ. ಇದಲ್ಲದೇ, ಚನ್ನಪಟ್ಟಣ ತಾಲೂಕಿನ ಹೊಂಗನೂರು ಕೆರೆ ಕೋಡಿ ಒಡೆದು ಕಬ್ಬಾಳು ಸಾತನೂರು ಹೆದ್ದಾರಿ ಜಲಾವೃತವಾಗಿವೆ. ಕೋಡಿ ಒಡೆದ ನೀರಿನಲ್ಲಿಯೇ ಬೃಹತ್ ವಾಹನಗಳ ಸಂಚಾರವಾಗುತ್ತಿದೆ.
ಇದನ್ನೂ ಓದಿ: ಕಾಫಿನಾಡಿನಲ್ಲಿ ಮಳೆ ಅಬ್ಬರ: 50 ಕೆರೆಗಳು ಸಂಪೂರ್ಣ ಭರ್ತಿ