ರಾಮನಗರ: ಬಿಜೆಪಿ ಸರ್ಕಾರ ತನ್ನ ಹಿಡನ್ ಅಜೆಂಡಾಗಳಿಗೆ ಜೋತುಬಿದ್ದು ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಜನತಾ ಪರ್ವ 1.O ಹಾಗೂ ಮಿಷನ್ 123 ಗುರಿಯೊಂದಿಗೆ ರಾಮನಗರದ ಬಿಡದಿಯ ತೋಟದಲ್ಲಿ ನಡೆಯುತ್ತಿರುವ ಸಂಘಟನಾ ಕಾರ್ಯಾಗಾರದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಬಿಜೆಪಿ ಸರ್ಕಾರ ತೀವ್ರ ನಿರ್ಲಕ್ಷ್ಯ ತೋರಿದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾನು ಜಾರಿಗೆ ತಂದ ಉದ್ಯೋಗ ಸೃಷ್ಟಿಯ ಕಾರ್ಯಕ್ರಮಗಳನ್ನು ಸರ್ಕಾರ ನಿರ್ಲಕ್ಷಿಸಿದೆ ಎಂದಿದ್ದಾರೆ.
ಉದ್ಯೋಗ ಕೊಡುವುದಾಗಿ ಹೇಳಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಿತ್ತು. ಆದರೆ ದುಡಿಯುವ ಕೈಗಳಿಗೆ ಕೆಲಸ ಕೊಡದೆ ನಿರುದ್ಯೋಗವನ್ನು ಉಡುಗೊರೆಯಾಗಿ ನೀಡಿದೆ. 9 ಜಿಲ್ಲೆಗಳಲ್ಲಿ ಕೈಗಾರಿಕಾ ಸಮುಚ್ಚಯ ಮಾಡಲು ಸಮ್ಮಿಶ್ರ ಸರ್ಕಾರ ನಿರ್ಧರಿಸಿತ್ತು. ಆದರೆ ಈ ಸರ್ಕಾರ ಆ ಯೋಜನೆಯನ್ನು ಮೂಲೆಗುಂಪು ಮಾಡಿದೆ ಎಂದು ಆರೋಪಿಸಿದರು.
ಯುವ ಜೆಡಿಎಸ್ ಪಡೆಗೆ ಸಿದ್ಧತೆ:
ರಾಜ್ಯದ ಪ್ರತಿಯೊಂದು ಕುಟುಂಬದ ಯುವಕರಿಗೆ ಉದ್ಯೋಗ ದೊರಕಬೇಕು. ನಿರುದ್ಯೋಗ ತೊಡೆದು ಹಾಕುವುದು ಜೆಡಿಎಸ್ ಗುರಿ. ಮೊದಲು ಎಲ್ಲರಿಗೂ ಕೆಲಸ ಸಿಗಲಿ, ಬದುಕು ಸಿಗಲಿ. ಆಮೇಲೆ ಹಿಂದೂ ರಾಷ್ಟ್ರದ ಬಗ್ಗೆ ಯೋಚನೆ ಮಾಡೋಣ. ರಾಜ್ಯದ ಮೂಲೆ ಮೂಲೆಯಲ್ಲಿ ಯುವಕರು ಸಂಘಟನೆ ಮಾಡಬೇಕು. 2023ರಲ್ಲಿ ಯುವ ಶಕ್ತಿ, ಮಹಿಳಾ ಶಕ್ತಿ ಜನಪರ ಸರ್ಕಾರ ತರಬೇಕಾಗುತ್ತದೆ. ನಿಖಿಲ್ ಹಾಗೂ ಪ್ರಜ್ವಲ್ ಜಂಟಿ ನಾಯಕತ್ವದಲ್ಲಿ ಯುವ ಜನತೆಯನ್ನು ಒಗ್ಗೂಡಿಸಿ ಮುಂದಿನ ಚುನಾವಣೆ ಎದುರಿಸಲಾಗುವುದು ಎಂದರು.
ಇದನ್ನೂ ಓದಿ: ರಾಜ್ಯದ ಮೊದಲ ಎಲೆಕ್ಟ್ರಿಕ್ ಬಸ್ ಓಡಾಟಕ್ಕೆ ಸಿದ್ಧ: ಏನಿದರ ವಿಶೇಷತೆ?