ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಮತ ಎಣಿಕೆ ಮುಕ್ತಾಯವಾಗಿದ್ದು, ಹೆಚ್‌ಡಿ ಕುಮಾರಸ್ವಾಮಿ ಬಿಜೆಪಿ ಅಭ್ಯರ್ಥಿ ಸಿಪಿ ಯೋಗೇಶ್ವರ್ ವಿರುದ್ಧ 13,595 ಮತಗಳ ಅಂತರದಿಂಂದ ಭರ್ಜರಿ ಜಯ ಗಳಿಸಿದ್ದಾರೆ. ಈ ಮೂಲಕ ಕುಮಾರಸ್ವಾಮಿ ಐದನೇ ಬಾರಿಗೆ ಗೆಲುವು ಸಾಧಿಸಿದ್ದಾರೆ.
ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ (ಹೆಚ್ ಡಿ ಕುಮಾರಸ್ವಾಮಿ) ಅವರು ರಾಜ್ಯ ರಾಜಕೀಯದಲ್ಲಿ ತಮ್ಮದೇಯಾದ ವರ್ಚಸ್ಸು ಹೊಂದಿರುವ ಜನನಾಯಕ. 1959 ಡಿಸೆಂಬರ್ 19ರಂದು ಹಾಸನ ಜಿಲ್ಲೆಯ ಹರದನಹಳ್ಳಿ ದೇವೇಗೌಡ ಮತ್ತು ಚೆನ್ನಮ್ಮ ಅವರ ಮೂರನೇ ಪುತ್ರರಾಗಿ ಜನಿಸಿದ ಅವರು, ರಾಜ್ಯದ 18ನೇ ಮುಖ್ಯಮಂತ್ರಿ ಕೂಡ ಆಗಿದ್ದರು. ರಾಜಕೀಯ ಪದಾರ್ಪಣೆಗೂ ಮುನ್ನ ಅವರು ಚಲನಚಿತ್ರ ನಿರ್ಮಾಪಕರೂ ಕೂಡ ಆಗಿದ್ದಾರೆ. 1986ರ ಮಾ. 13 ರಂದು ಅನಿತಾ ಅವರೊಂದಿಗೆ ವಿವಾಹವಾಗಿರುವ ಕುಮಾರಸ್ವಾಮಿ ದಂಪತಿಗೆ ನಿಖಿಲ್ ಗೌಡ ಎಂಬ ಪುತ್ರನನ್ನು ಹೊಂದಿದ್ದಾರೆ. ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪೂರೈಸಿಕೊಂಡಿರುವ ಕುಮಾರಸ್ವಾಮಿ, ನಂತರ ನ್ಯಾಷನಲ್ ಕಾಲೇಜಿನಿಂದ ಬಿಎಸ್‌ಸಿ ಡಿಗ್ರಿ ಪಾಸು ಮಾಡಿಕೊಂಡಿದ್ದಾರೆ.
ರಾಜಕೀಯ ಪಯಣ: 1996 ರಲ್ಲಿ ಪ್ರಥಮ ಬಾರಿಗೆ ಚುನಾವಣಾ ರಾಜಕೀಯ ಪ್ರವೇಶಿಸಿದ ಕುಮಾರಸ್ವಾಮಿ, 1996 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಿಂದ 11ನೇ ಲೋಕಸಭೆಯ ಸದಸ್ಯರಾಗಿ ಚುನಾಯಿತರಾದರು. 1998 ರಲ್ಲಿ ಕನಕಪುರ ಲೋಕಸಭೆ ಕ್ಷೇತ್ರದಿಂದ ಮತ್ತು 1999ರಲ್ಲಿ ಸಾತನೂರು ವಿಧಾನಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡ ಕುಮಾರಸ್ವಾಮಿ, 2004 ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾದರು. ಕಾಂಗ್ರೆಸ್ ಮತ್ತು ಜನತಾದಳ(ಎಸ್) ಮೈತ್ರಿಕೂಟದ ಸರ್ಕಾರ ಸ್ಥಾಪನೆ ಕಾಲದಲ್ಲಿ ಕುಮಾರಸ್ವಾಮಿ, ಜನತಾದಳದ ಕಾರ್ಯಾಧ್ಯಕ್ಷರಾರಾಗಿ ಸೇವೆ ಸಲ್ಲಿಸಿದರು.
2004ರಲ್ಲಿ ನಡೆದ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಕೈಜೋಡಿಸಿ ಸರ್ಕಾರ ರಚಿಸಲಾಯಿತು. ಈ ಸಂದರ್ಭದಲ್ಲಿ ಕುಮಾರಸ್ವಾಮಿ ರಾಮನಗರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2005ರಲ್ಲಿ ನಡೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಿತು. ಪರಿಣಾಮ ಬದಲಾದ ರಾಜಕೀಯ ಪರಿಸ್ಥಿತಿಯಿಂದ ಮೈತ್ರಿ ಮುರಿದು ಬಿದ್ದಿತು. ಸಿದ್ದರಾಮಯ್ಯ ನಡುವೆ ನಡುವಿನ ಮೈತ್ರಿಯ ಮಾತುಕತೆಯಿಂದ ಅಸಂತುಷ್ಟರಾದ ಕುಮಾರಸ್ವಾಮಿ, 18 ಜನವರಿ 2006ರಂದು ತಮ್ಮ ತಂದೆ ಹೆಚ್.ಡಿ.ದೇವೇಗೌಡರ ಇಚ್ಛೆಯ ವಿರುದ್ದ, ತಮ್ಮ ಪಕ್ಷದ 46 ಶಾಸಕರೊಡನೆ ರಾಜ್ಯಪಾಲರೊಡನೆ ಕಾಂಗ್ರೆಸ್ನ ಧರಂ ಸಿಂಗ್ ನೇತೃತ್ವದ ಸರ್ಕಾರಕ್ಕೆ ಕೊಟ್ಟ ಬೆಂಬಲ ಹಿಂತೆಗೆದುಕೊಂಡರು.
2006 ಫೆಬ್ರುವರಿ 3ರಂದು ಜೆಡಿಎಸ್ ಹಾಗೂ ಬಿಜೆಪಿ ಸೇರಿ ತಲಾ 20 ತಿಂಗಳ ಸರಕಾರ ನಡೆಸುವ ಒಪ್ಪಂದ ಮಾಡಿಕೊಂಡ ನಂತರ ಆಗಿನ ರಾಜ್ಯಪಾಲ ಟಿ.ಎನ್. ಚತುರ್ವೇದಿಯವರು ಕುಮಾರಸ್ವಾಮಿ ಅವರಿಗೆ ಸರ್ಕಾರ ರಚನೆಯ ಆಹ್ವಾನ ನೀಡಿದರು. ಫೆಬ್ರುವರಿ 4, 2006 ರಂದು ರಾಜ್ಯದ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕುಮಾರಸ್ವಾಮಿ, ಅಕ್ಟೋಬರ್ 8, 2007ರ ವರೆಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆದರು. ಒಪ್ಪಂದದಂತೆ ಬಾಕಿ ಇದ್ದ 20 ತಿಂಗಳ ಅವಧಿಗೆ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲು ನಿರಾಕರಿಸಿ ಅವರು, ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು.
2013ರಂದು ಕರ್ನಾಟಕ ವಿಧಾನಸಭೆಯಲ್ಲಿ ಹೆಚ್ ಡಿ ಕುಮಾರಸ್ವಾಮಿ ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಯಿತು. ಮತ್ತೆ ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಸರ್ಕಾರ ರಚಿಸಿದ ಕುಮಾರಸ್ವಾಮಿ ಮೇ 23, 2018 ರಂದು ಕರ್ನಾಟಕದ ಮುಖ್ಯಮಂತ್ರಿಯಾದರು. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ರಾಜೀನಾಮೆನಿಂದ ಅವರು ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಉಳಿಯಲಿಲ್ಲ. ಬದಲಾದ ರಾಜಕೀಯ ಸನ್ನಿವೇಶಗಳಿಂದ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡುವ ಮೊದಲೇ ಕುಮಾರಸ್ವಾಮಿ, ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು.
ಇದನ್ನೂ ಓದಿ:ಜನಾದೇಶ ಸ್ವಾಗತಿಸುತ್ತೇನೆ, ನೂತನ ಸರ್ಕಾರಕ್ಕೆ ಶುಭವಾಗಲಿ: ಹೆಚ್‌ಡಿಕೆ