ರಾಮನಗರ: ನಾನು ಯಾವುದಕ್ಕೂ ಹೆದರುವುದಿಲ್ಲ. ಸದನದಲ್ಲಿ ಮುಖ್ಯಮಂತ್ರಿಗಳಿಂದ ಏನಾದರೂ ಉತ್ತರ ಬಂತಾ?. ಬಿಎಂಎಸ್ ಟ್ರಸ್ಟ್ ಪಬ್ಲಿಕ್ ಪ್ರಾಪರ್ಟಿ. ಖಾಸಗಿ ವ್ಯಕ್ತಿಗೆ ಸರ್ಕಾರದ ಆಸ್ತಿ ಹೋಗುತ್ತಿದೆ. ಸದನದಲ್ಲಿ ದಾಖಲೆ ಸಮೇತ ಇಟ್ಟಿದ್ದಕ್ಕೆ ಇವರ ಬಳಿ ಉತ್ತರ ಇಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಎಂಎಸ್ ಟ್ರಸ್ಟ್ ಹಗರಣ ವಿಚಾರವಾಗಿ ಸದನದಲ್ಲಿ ಸಮರ್ಥವಾಗಿ ಉತ್ತರ ಕೊಟ್ಟಿದ್ದೇನೆ ಎಂಬ ಅಶ್ವತ್ಥ ನಾರಾಯಣ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ಸರ್ಕಾರ ಬಂಡತನದಿಂದ ವರ್ತಿಸುತ್ತಿದೆ. ಇಂತವರಿಗೆ ಏನು ಹೇಳೋಕೆ ಆಗುತ್ತೆ. ಸದನದಲ್ಲಿ ಮುಖ್ಯಮಂತ್ರಿಯಾದಿಯಾಗಿ ಎಲ್ಲ ಬಿಜೆಪಿಗರು ಮೌನಕ್ಕೆ ಯಾಕೆ ಶರಣಾದ್ರು?, ಯಾಕೆ ಯಾರು ಅಶ್ವತ್ಥ ನಾರಾಯಣ್ ಬೆಂಬಲಕ್ಕೆ ನಿಲ್ಲಲಿಲ್ಲ?. ಕೊಟ್ಯಂತರ ರೂ. ಹಣ ಲೂಟಿ ಮಾಡಿದ್ದಾರೆ. ಮುಂದೆ ಜನ ಇವರಿಗೆ ಬುದ್ಧಿ ಕಲಿಸುತ್ತಾರೆ ಎಂದರು.
ಇದನ್ನೂ ಓದಿ: BMS ಟ್ರಸ್ಟ್ ಅಕ್ರಮ ಬಗ್ಗೆ ಪ್ರಧಾನಿ ಮೋದಿಗೆ ದಾಖಲೆ ಸಮೇತ ದೂರು ಕೊಡುತ್ತೇನೆ: ಹೆಚ್ ಡಿ ಕುಮಾರಸ್ವಾಮಿ
ಬಿಎಂಎಸ್ ಟ್ರಸ್ಟ್ ವಿಚಾರವನ್ನ ಅಷ್ಟು ಸುಲಭವಾಗಿ ನಾನು ಬಿಡೋದಿಲ್ಲ. ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುವಂತೆ ಮಾಡುತ್ತೇನೆ. ಪ್ರಧಾನ ಮಂತ್ರಿಗಳು ಭ್ರಷ್ಟಾಚಾರ ನಿಲ್ಲಿಸುತ್ತೇನೆ ಅಂತಾ ಹೇಳುತ್ತಾರೆ. ಈಗ ದಾಖಲೆ ಸಮೇತ ಕಳುಹಿಸುತ್ತೇನೆ. ಏನು ಉತ್ತರ ಕೊಡುತ್ತಾರೋ ನೋಡೋಣ ಎಂದು ಟಾಂಗ್ ಕೊಟ್ಟರು.
ಪಿಎಫ್ಐ ಸಂಘಟನೆ ಬ್ಯಾನ್: ಪಿಎಫ್ಐ ಸಂಘಟನೆ ಬ್ಯಾನ್ ವಿಚಾರವಾಗಿ ಈಗಾಗಲೇ ನಾನು ಹೇಳಿದ್ದೇನೆ. ಯಾವುದೇ ಸಂಘಟನೆಗಳು ಸಮಾಜಘಾತುಕ ಚಟುವಟಿಕೆಯಲ್ಲಿ ತೊಡಗಿದರೆ ಕಠಿಣ ಕ್ರಮ ಆಗಬೇಕು. ಎನ್ಐಎ ದಾಳಿಯ ಸತ್ಯಾಂಶಗಳನ್ನು ಜನತೆ ಮುಂದೆ ಇಡಬೇಕು. ಯಾವ ಯಾವ ಸಂಘಟನೆಗಳಿಂದ ದೇಶ ದ್ರೋಹದ ಕೆಲಸ ಆಗಿದೆ?, ಯಾವ ರೀತಿ ಗಲಭೆ ಸೃಷ್ಟಿಗೆ ಪ್ರೋತ್ಸಾಹ ಕೊಡುತ್ತಿದ್ದಾರೆ ಎಂಬ ಮಾಹಿತಿ ಜನತೆ ಮುಂದೆ ಇಡಬೇಕು. ಇದು ಕೇಂದ್ರ ಸರ್ಕಾರ ಕರ್ತವ್ಯ ಎಂದರು.
ಇದನ್ನೂ ಓದಿ: ಬಿಎಂಎಸ್ ಟ್ರಸ್ಟ್ ಅಕ್ರಮ: ತನಿಖೆಗೆ ಆಗ್ರಹಿಸಿ ಜೆಡಿಎಸ್ ಧರಣಿ, ಸ್ಪೀಕರ್ ನೇತೃತ್ವದಲ್ಲಿ ಸಂಧಾನ ಸಭೆ
ಸಂಘಟನೆ ಬ್ಯಾನ್ ಮಾಡಿದ ತಕ್ಷಣ ಸಂಪೂರ್ಣ ಶಾಂತಿ ನೆಲಸುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸೌಹಾರ್ದತೆ ಬೆಳೆಸುವ ಕೆಲಸವನ್ನ ಸರ್ಕಾರ ಮಾಡಬೇಕು. ಯಾವುದೇ ಒಂದು ಸಂಘಟನೆ ಬ್ಯಾನ್ ಮಾಡಿದ್ರೆ ಶಾಂತಿ ನೆಲೆಸಲ್ಲ ಎಂದರು.
ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಭಾರತ ಯಾವಾಗ ಒಡೆದು ಹೋಗಿದೆ ಅನ್ನೋದು ನನಗೆ ಗೊತ್ತಿಲ್ಲ. ಭಾರತ ಜೋಡೋ ಮುಖಾಂತರ ದೇಶವನ್ನ ಒಗ್ಗೂಡಿಸುತ್ತೇವೆ ಅಂತಾ ಕಾಂಗ್ರೆಸ್ ನಾಯಕರು ಹೊರಟಿದ್ದಾರೆ. ಯಾವಾಗ ದೇಶ ಛಿದ್ರ ಆಗಿದೆ ಅಂತಾ ಗೊತ್ತಿಲ್ಲ. ಛಿದ್ರ ಆಗಿದ್ರೆ ಕಾರ್ಯಕ್ರಮದ ಮುಖಾಂತರ ಅದನ್ನು ಹೇಗೆ ಸರಿಪಡಿಸುತ್ತಾರೆ ಎನ್ನುವುದನ್ನ ಜನರ ಮುಂದೆ ಇಡಬೇಕು.
ರಾಜ್ಯದಲ್ಲಿ ಹಲವು ಸಮಸ್ಯೆಗಳಿವೆ. ಅದರ ವಿರುದ್ಧ ನಾವು ಹೋರಾಡಬೇಕು. ಕಾಂಗ್ರೆಸ್ನವರು ಭಾರತ್ ಜೋಡೋ, ಪೇಸಿಎಂ ಮುಖಾಂತರ ಜನರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯನಾ? ಎಂದು ಟೀಕಿಸಿದರು.
ಇದನ್ನೂ ಓದಿ: ಸಚಿವ ಅಶ್ವತ್ಥನಾರಾಯಣ ರಾಜೀನಾಮೆಗೆ ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹ