ರಾಮನಗರ: ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ಸಮಗ್ರ ಅಭಿವೃದ್ಧಿಪಡಿಸುವುದೇ ನನ್ನ ಗುರಿಯಾಗಿದೆ. ಅದಕ್ಕಾಗಿ ಎಷ್ಟು ಬೇಕಾದರೂ ಹಣವನ್ನು ತಂದು ಕೊಡಲು ನಾನು ಸಿದ್ಧನಾಗಿದ್ದೇನೆ. ನಾನು ಕಲಾವಿದರ ಕ್ಷೇತ್ರದಿಂದ ನೇಮಕವಾದವನಲ್ಲ, ನೇರವಾಗಿ ಜನರಿಂದ ಆಯ್ಕೆಯಾದವನು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಸಿ.ಪಿ.ಯೋಗೇಶ್ವರ್ಗೆ ಟಾಂಗ್ ನೀಡಿದರು.
ಚನ್ನಪಟ್ಟಣದ ತಾಲೂಕು ಪಂಚಾಯತ್ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನರ ಅನುಕೂಲಕ್ಕಾಗಿ ಅಭಿವೃದ್ಧಿ ಕಾರ್ಯಗಳನ್ನ ಹಮ್ಮಿಕೊಂಡಿದ್ದೇವೆ. ಅವುಗಳನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಯಾರ ಮರ್ಜಿಗೂ ಒಳಗಾಗದೆ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.
ವಿವಿಧ ಇಲಾಖಾ ಪ್ರಗತಿ ಪರಿಶೀಲಿಸಿದ ಅವರು, ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಿಡುಗಡೆಯಾದ ಕೋಟ್ಯಂತರ ರೂ. ಅನುದಾನವನ್ನು ಬಳಕೆ ಮಾಡದಿರುವುದರ ಬಗ್ಗೆ ವಿವಿಧ ಇಲಾಖಾ ಅಧಿಕಾರಿಗಳನ್ನ ತರಾಟಗೆ ತೆಗೆದುಕೊಂಡರು. ಆದಷ್ಟು ಬೇಗ ಅನುದಾನವನ್ನು ಬಳಕೆ ಮಾಡಿಕೊಂಡು, ಅಭಿವೃದ್ಧಿಗೆ ಪೂರಕವಾಗಿ ತಮ್ಮ ಬೇಡಿಕೆಯನ್ನು ಸಲ್ಲಿಸಬೇಕು. ಇಲ್ಲದಿದ್ದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮನವಿ ಸಲ್ಲಿಸಲು ಕಾದು ನಿಂತ ಸಾರ್ವಜನಿಕರು: ಹೆಚ್.ಡಿ.ಕುಮಾರಸ್ವಾಮಿ ತಾಲೂಕಿಗೆ ಆಗಮಿಸಿರುವ ವಿಚಾರ ತಿಳಿದ ಸಾರ್ವಜನಿಕರು, ಮಹಿಳೆಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ತಾಲೂಕು ಪಂಚಾಯತ್ ಕಚೇರಿ ಆವರಣದಲ್ಲಿ ಮತ್ತು ಮೆಟ್ಟಿಲಿನಲ್ಲಿ ಸಾಲುಗಟ್ಟಿ ನಿಂತಿದ್ದರು. ಸಭೆ ಮುಗಿಸಿ ಹೊರ ಬಂದ ಕುಮಾರಸ್ವಾಮಿ ಎಂದಿನಂತೆ ತಾಳ್ಮೆಯಿಂದ ಎಲ್ಲರ ಅಹವಾಲುಗಳನ್ನು ಆಲಿಸಿ, ಮನವಿ ಪತ್ರಗಳನ್ನು ಸ್ವೀಕರಿಸಿದರು. ಸಮಸ್ಯೆಗೆ ಪರಿಹಾರ ದೊರಕಿಸಿಕೊಡಿಸುವುದಾಗಿ ತಿಳಿಸಿದರು.