ರಾಮನಗರ: ಎರಡು ತಿಂಗಳ ಹಿಂದೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹಾರೋಹಳ್ಳಿಯಲ್ಲಿ ಕೊಲೆ ಮಾಡಿ ಯಾರಿಗೂ ಗೊತ್ತಾಗದಂತೆ ಮುಚ್ಚಿಟ್ಟಿದ್ದ ಸತ್ಯವನ್ನ ಪೊಲೀಸರು ಬಯಲಿಗೆಳೆದಿದ್ದಾರೆ.
ಮರಳವಾಡಿ ಹೋಬಳಿ ಮರಸಳ್ಳಿ ಬಳಿಯ ಸುವರ್ಣಮುಖಿ ಹೊಳೆಯಲ್ಲಿ ಕಳೆದ ಅಕ್ಟೋಬರ್ 30ರಂದು ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ವಿಷಯ ತಿಳಿದ ಹಾರೋಹಳ್ಳಿ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ಕೈಗೊಂಡಿದ್ದರು. ಅಲ್ಲಿ ಶವವಾಗಿ ಸಿಕ್ಕಿದ್ದ ವ್ಯಕ್ತಿ ಆನೇಕಲ್ ತಾಲ್ಲೂಕಿನ ಮಾದಪ್ಪನದೊಡ್ಡಿ ಗ್ರಾಮದ ಮಹದೇವ ಎಂಬ ಫಾರೆಸ್ಟ್ ವಾಚರ್ನದ್ದಾಗಿತ್ತು.
ಆದ್ರೆ, ಈ ಮಹದೇವ ತಮ್ಮ ಸೋದರ ಮಾವ ಹಾರೋಹಳ್ಳಿಯ ಮಾದಪ್ಪನದೊಡ್ಡಿ ಗ್ರಾಮದ ಚಿಕ್ಕತಿಮ್ಮಯ್ಯನ ಮನೆಯಲ್ಲಿ ವಾಸವಿದ್ದ. ಸೋದರ ಮಾವನ ಮನೆಯಲ್ಲಿದ್ದ ಮಹದೇವ ತನ್ನ ಸೋದರತ್ತೆ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ. ಈ ವಿಷಯ ಅದು ಹೇಗೋ ಚಿಕ್ಕತಿಮ್ಮಯ್ಯನ ಕಿವಿಗೆ ಬಿದ್ದಿತ್ತು. ಇದನ್ನ ಅರಗಿಸಿಕೊಳ್ಳದ ಸೋದರಮಾವ ಮಹದೇವನನ್ನ ಕೊಲೆ ಮಾಡಲು ಸಂಚು ರೂಪಿಸಿದ್ದ.
ಓದಿ: ನಾನು ರಾಗಿಣಿಯನ್ನು ಇಷ್ಟಪಟ್ಟಿದ್ದು ನಿಜ, ಪ್ರಪೋಸ್ ಮಾಡಿದ್ದೂ ನಿಜ: ಶಿವಪ್ರಕಾಶ್ ಚಿಪ್ಪಿ
ಚಿಕ್ಕತಿಮ್ಮಯ್ಯ ಮಹದೇವನನ್ನ ಕೊಲೆ ಮಾಡಲು ಮಹದೇವನ ಸ್ನೇಹಿತ ರಮೇಶ್ ಎಂಬುವನನ್ನು ಬಳಸಿಕೊಂಡು ಕೊಲೆ ಸಂಚು ರೂಪಿಸಿದ್ದ. ಹತ್ಯೆ ಮಾಡುವ ಉದ್ದೇಶದಿಂದ ಚಿಕ್ಕತಿಮ್ಮಯ್ಯ ಮತ್ತು ರಮೇಶ್ ಮಹದೇವನಿಗೆ ಮದ್ಯಪಾನದ ಆಸೆ ತೋರಿಸಿ ಅಕ್ಟೋಬರ್ 12 ರಂದು ಅರಣ್ಯದೊಳಗೆ ಕರೆದುಕೊಂಡು ಹೋಗಿ ಮದ್ಯದಲ್ಲಿ ಕೀಟ ನಾಶಕವನ್ನು ಬೆರಸಿ ಕುಡಿಸಿದ್ದರು.
ಮಹದೇವ ತೀವ್ರ ಅಸ್ವಸ್ಥನಾದಾಗ ಕತ್ತಲೆಯಾಗುವ ತನಕ ಅಲ್ಲಿಯೇ ಇದ್ದು ರಾತ್ರಿಯಾಗುತ್ತಿದ್ದಂತೆ ಸುವರ್ಣಮುಖಿ ನದಿಯ ಬ್ರಿಡ್ಜ್ ಕೆಳಗೆ ಶವವನ್ನು ಬಿಸಾಡಿ ಕೊಲೆ ಆರೋಪಿಗಳು ಮನೆಗೆ ತೆರಳಿದ್ದರು. ಕೊನೆಗೂ ಪೊಲೀಸರ ತನಿಖೆಯಿಂದ ಕೊಲೆ ರಹಸ್ಯ ಬಯಲಾಗಿ ಇಬ್ಬರು ಆರೋಪಿಗಳು ಕಂಬಿ ಹಿಂದೆ ಬಂಧಿಯಾಗಿದ್ದಾರೆ.
ಒಟ್ಟಾರೆ ಕೊಲೆ ಮಾಡಿ ಸಹಜ ಸಾವು ಎಂದು ಬಿಂಬಿಸಲು ಮುಂದಾಗಿದ್ದ ಇಬ್ಬರು ಆರೋಪಿಗಳು ಎರಡು ತಿಂಗಳ ನಂತರ ಪೊಲೀಸರ ಅತಿಥಿಯಾಗಿದ್ದರೆ, ಉಂಡ ಮನೆಗೆ ದ್ರೋಹ ಬಗೆದ ಮಹದೇವ ಮಸಣ ಸೇರಿದ್ದಾನೆ.