ರಾಮನಗರ: ಇವತ್ತಿನ ಬಜೆಟ್ ಬಗ್ಗೆ ನನಗಿಂತ ಬಿಜೆಪಿ ಪಕ್ಷದ ಸಚಿವರನ್ನೇ ಕೇಳಿ. ಈ ಬಜೆಟ್ ನಂತರ ಅವರ ಇಲಾಖೆಗಳ ಸ್ಥಿತಿ ಹೇಗಾಗಿದೆ ಎಂದು ಹೇಳ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಚನ್ನಪಟ್ಟಣದ ಹೊರವಲಯದ ದೊಡ್ಡಮಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಅವರು, ಈ ಬಜೆಟ್ ಬಗ್ಗೆ ನನಗೆ ಯಾವ ನಿರೀಕ್ಷೆಯೂ ಇರಲಿಲ್ಲ. ಈ ಬಜೆಟ್ ಬಗ್ಗೆ ಯಾರಿಗೂ ಖುಷಿ ಇಲ್ಲ. ಅವರ ಮಂತ್ರಿಗಳಿಗೆ ಈ ಬಜೆಟ್ ಬಗ್ಗೆ ವಿಶ್ವಾಸವಿಲ್ಲ. ಇನ್ನು ಜನಸಾಮಾನ್ಯರಿಗೆ ಎಲ್ಲಿಂದ ಬರಬೇಕು ಎಂದಿದ್ದಾರೆ.
ಮತ್ತೆ ಸಿಎಂ ಆಗೋ ನಂಬಿಕೆ ನನಗಿದೆ: ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರ ಬದಲಾವಣೆ ಮಾಡ್ತಾರೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಕ್ಷೇತ್ರವನ್ನ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಚನ್ನಪಟ್ಟಣ ಜನತೆ ಪ್ರೀತಿಯಿಂದ ನನ್ನನ್ನ ಶಾಸಕನಾಗಿ ಮಾಡಿದ್ದಾರೆ. ರಾಮನಗರ - ಚನ್ನಪಟ್ಟಣ ನನ್ನ ಎರಡು ಕಣ್ಣುಗಳು. ಇವೆರಡೂ ನನಗೆ ಒಂದೇ. ನಾನು ಮತ್ತೆ ಚನ್ನಪಟ್ಟಣದಿಂದಲೇ ಸ್ಪರ್ಧೆ ಮಾಡಿ ಗೆದ್ದು ಮುಖ್ಯಮಂತ್ರಿ ಆಗುತ್ತೇನೆ ಎಂದರು.
ಇದೇ ವೇಳೆ ಮುರುಗೇಶ್ ನಿರಾಣಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಆದಿಚುಂಚನಗಿರಿಗೆ ಬಂದದ್ದು ಪೂಜ್ಯರ ಆಶೀರ್ವಾದಕ್ಕಾಗಿ ಅಷ್ಟೇ. ಯಾವುದೇ ರಾಜಕೀಯ ಉದ್ದೇಶವಿಲ್ಲ. ಧಾರ್ಮಿಕ ಕಾರ್ಯಕ್ರಮಕ್ಕೆ ಬಂದಿದ್ದಾರೆ. ನನ್ನ ಜೊತೆಗೆ ಯಾವ ರಾಜಕೀಯ ಚರ್ಚೆಗಳೂ ಅಲ್ಲಿ ನಡೆದಿಲ್ಲ. ನಾನು ಯಾವುದೇ ಸರ್ಕಾರವನ್ನ ಅಸ್ಥಿರಗೊಳಿಸಲು ಹೋಗಲ್ಲ. ಅದರ ಅವಶ್ಯಕತೆಯೂ ನನಗೆ ಇಲ್ಲ. ಯಡಿಯೂರಪ್ಪನವರು ಬಹಳ ಶ್ರಮಪಟ್ಟು ಸಿಎಂ ಆಗಿದ್ದಾರೆ. ಜನ ನಾನು ಮಾಡಿರುವ ಕೆಲಸವನ್ನ ನೆನಪಿಸಿಕೊಂಡು ಮತ್ತೆ ಅವಕಾಶ ಕೊಡುವ ವಿಶ್ವಾಸವಿದೆ. ಇನ್ನೂ ಸ್ವಲ್ಪ ಆರೋಗ್ಯ ಇಟ್ಟುಕೊಂಡಿದ್ದೇನೆ. ಜನ ಅಧಿಕಾರ ಕೊಡ್ತಾರೆ ಅನ್ನೋ ನಂಬಿಕೆ ಇದೆ. ಸರ್ಕಾರ ಅಸ್ಥಿರಗೊಳಿಸುವ ಯಾವ ಗುಂಪುಗಳ ಜೊತೆಗೂ ನಾನಿಲ್ಲ ಎಂದರು.