ರಾಮನಗರ : ಇಲ್ಲಿ ನೆಲೆಸಿದ್ದಾಳೆ ಭಕ್ತರ ಇಷ್ಟಾರ್ಥಗಳನ್ನ ನೆರವೇರಿಸೋ ದೇವತೆ ಚಾಮುಂಡೇಶ್ವರಿ ತಾಯಿ. ನಿಮ್ಮ ಯಾವುದೇ ಸಮಸ್ಯೆಗಳಿದ್ರೂ ಈ ತಾಯಿ ನಿವಾರಿಸುತ್ತಾಳೆ. ಹೀಗಾಗಿ, ರಾಜ್ಯ ಹಾಗೂ ಹೊರ ರಾಜ್ಯದಿಂದ ಭಕ್ತಾಧಿಗಳ ದಂಡೇ ಈ ದೇಗುಲಕ್ಕೆ ಆಗಮಿಸಿ ಪವಾಡ ಬಸವನ ದರ್ಶನ ಪಡೆಯುತ್ತಾರೆ.
ಗೌಡಗೆರೆ ಗ್ರಾಮದ ಚಾಮುಂಡೇಶ್ವರಿ ಮಹಿಮೆ : ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿರುವ ಚಾಮುಂಡೇಶ್ವರಿ ದೇವಾಲಯಕ್ಕೆ ಕಷ್ಟ ಎಂದು ಬೇಡಿ ಬರುವ ಭಕ್ತರು ಎಂದೂ ಕೂಡ ಬರಿಗೈನಲ್ಲಿ ಹೋದ ಇತಿಹಾಸವೇ ಇಲ್ಲ.
ಈ ದೇವಸ್ಥಾನದ ಮತ್ತೊಂದು ವಿಶೇಷ ಅಂದ್ರೆ ಅದು ಪವಾಡ ಬಸವ. ಇಲ್ಲಿಗೆ ಆಗಮಿಸುವ ಭಕ್ತರಿಗೆ ಬಸವಣ್ಣ ಒಂದು ನ್ಯಾಯಾಲಯವಿದ್ದಂತೆ. ಈ ಬಸವಣ್ಣ ಇದುವರೆಗೂ ಸಾವಿರಾರು ಜನರ ಕುಡಿತ ಬಿಡಿಸಿ ಮನೆಮಂದಿಯ ನೆಮ್ಮದಿ ಕಾಪಾಡಿದೆ ಎಂಬ ಪ್ರತೀತಿ ಇದೆ.
ಸುಮಾರು 57 ರಿಂದ 63 ಅಡಿ ಎತ್ತರ ಬಂಗಾರ ಲೇಪಿತ ಚಾಮುಂಡೇಶ್ವರಿ ಬೃಹತ್ ಪ್ರತಿಮೆಯನ್ನ ಮಾಡಲಾಗುತ್ತಿರುವುದು ಇಲ್ಲಿನ ಮತ್ತೊಂದು ಆಸಕ್ತಿದಾಯಕ ವಿಚಾರ. ಇದು ದೇಶದಲ್ಲೇ ಮೊದಲ ಚಿನ್ನ ಲೇಪಿತ ವಿಗ್ರಹವಾಗಿದ್ದು, ಈ ಕಾರಣಕ್ಕಾಗಿಯೇ ರಾಜ್ಯ ಹಾಗೂ ಹೊರ ರಾಜ್ಯದಿಂದ ಭಕ್ತಾಧಿಗಳ ದಂಡು ಇಲ್ಲಿಗೆ ಆಗಮಿಸುತ್ತದೆ.
ದೇಗುಲಗಳ ಧರ್ಮದರ್ಶಿಗಳಾದ ಮಲ್ಲೇಶ್ ಮಾತನಾಡಿ, ಚಾಮುಂಡೇಶ್ವರಿ ದೇವಿಯ 60 ಅಡಿ ಎತ್ತರದ 18 ಭುಜಗಳ ಸಿಂಹ ವಾಹನರೂಢ ವಿಗ್ರಹವನ್ನ ಪ್ರತಿಸ್ಥಾಪನೆ ಮಾಡಲು ನಿರ್ಧರಿಸಿದ್ದೇವೆ. ಈ ವಿಗ್ರಹ ನಮ್ಮ ಕರ್ನಾಟಕ ಹಾಗೂ ದೇಶದ ಅತಿದೊಡ್ಡ ವಿಗ್ರಹವಾಗಲಿದೆ.
ಇದನ್ನು ಪಂಚಲೋಹಗಳಾದ ಚಿನ್ನ, ಬೆಳ್ಳಿ, ಹಿತ್ತಾಳೆ, ತಾಮ್ರ, ಕಂಚಿನಿಂದ ಸರಿ ಸುಮಾರು 30 ರಿಂದ 35 ಟನ್ ತೂಕದಲ್ಲಿ ತಯಾರಿಸಲಾಗುತ್ತಿದೆ. ಈಗಾಗಲೇ ಶೇ.40 %ರಷ್ಟು ಕೆಲಸ ಮುಗಿದಿದ್ದು, ಮುಂದಿನ ವರ್ಷದ ಏಪ್ರಿಲ್ ಅಥವಾ ಮೇ ತಿಂಗಳ ಸಮಯಕ್ಕೆ ವಿಗ್ರಹವನ್ನ ಲೋಕಾರ್ಪಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಓದಿ: ಹಾರಕೂಡ ಚೆನ್ನಬಸವ ಶಿವಯೋಗಿಗಳ 69ನೇ ಜಾತ್ರಾ ಮಹೋತ್ಸವ ಸಂಪನ್ನ
ಈ ವಿಗ್ರಹವನ್ನ ಕರ್ನಾಟಕದ ಜೊತೆಗೆ ತಮಿಳುನಾಡಿನ ಶಿಲ್ಪಿಗಳು ತಯಾರಿಸುತ್ತಿದ್ದಾರೆ. ಆದರೆ, ಮುಖ್ಯವಾಗಿ ವಿಗ್ರಹದ ಮಾಡೆಲ್‌ನ ತಯಾರಿ ಮಾಡಿರುವುದು ಮುಸ್ಲಿಂ ಸಮುದಾಯದ ಪಠಾಣ್ ಎನ್ನುವುದು ಮತ್ತೊಂದು ವಿಶೇಷ. ಪಠಾಣ್ ಮೂಲತಃ ಬೆಂಗಳೂರಿನವರಾಗಿದ್ದು, ಯಾವುದೇ ವಿಗ್ರಹವನ್ನ ತಯಾರು ಮಾಡಬೇಕಾದ್ರೆ ಆ ವಿಗ್ರಹದ ಮಾಡೆಲ್‌ನ ಮೊದಲು ತಯಾರಿಸಬೇಕಾಗುತ್ತದೆ.
ಆದರೆ, ಚಾಮುಂಡಿ ತಾಯಿಯ ವಿಗ್ರಹಕ್ಕೆ ಮಾಡೆಲ್ ವಿಗ್ರಹವನ್ನ ತಯಾರು ಮಾಡಿಕೊಟ್ಟಿರುವವರು ಮುಸ್ಲಿಂ ಸಮುದಾಯದ ಶಿಲ್ಪಿಯಾಗಿದ್ದು, ನಮಗೆ ಅತ್ಯಂತ ಸಂತೋಷದ ವಿಚಾರ ಎಂದು ತಿಳಿಸಿದ್ದಾರೆ.