ರಾಮನಗರ: ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲಿ ಕುಕ್ಕರ್ ಸ್ಫೋಟಗೊಂಡು ಬಾಲಕಿಗೆ ಗಂಭೀರ ಗಾಯವಾದ ಘಟನೆ ರಾಮನಗರದಲ್ಲಿ ನಡೆದಿದೆ. ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷವೊಂದು ಈ ಕುಕ್ಕರ್ ನೀಡಿತ್ತು ಎನ್ನಲಾಗಿದೆ. ರಾಮನಗರ ತಾಲೂಕಿನ ಕೂನಮುದ್ದನಹಳ್ಳಿ ಗ್ರಾಮದ ಮಹಾಲಕ್ಷ್ಮಿ (17) ಗಾಯಾಳು ಬಾಲಕಿ. ಬೆಳಗ್ಗೆ ಎಂದಿನಂತೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕುಕ್ಕರ್ ಸ್ಟೋಟಗೊಂಡು ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಬಾಲಕಿಗೆ ಮುಖದ ಭಾಗದಲ್ಲಿ ಗಂಭೀರ ಗಾಯವಾಗಿದ್ದು, ಆಕೆಗೆ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದರೆ ಬೆಂಗಳೂರಿಗೆ ಕಳುಹಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಜಗಳ ಕೊಲೆಯಲ್ಲಿ ಅಂತ್ಯ: ಕೂನಮುದ್ದನಹಳ್ಳಿಯಲ್ಲಿ ಕುಕ್ಕರ್ ಬ್ಲಾಸ್ಟ್ ಪ್ರಕರಣವಾದರೆ, ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಕೊನೆಯಲ್ಲಿ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಲಾರಿ ವ್ಯವಹಾರದ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಿಕರ ನಡುವೆ ಗಲಾಟೆ ನಡೆಯುತ್ತಿದ್ದ ಸಂದರ್ಭದಲ್ಲಿ ಗಲಾಟೆ ಬಿಡಿಸಲು ಬಂದ ವ್ಯಕ್ತಿಯೇ ಕೊಲೆಯಾದ ಘಟನೆ ರಾಮನಗರ ತಾಲೂಕಿನ ಹುಚ್ಚಮ್ಮನ ದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಮದ್ದೂರು ನಿವಾಸಿ ಮಂಜು (28) ಮೃತ ದುರ್ದೈವಿಯಾಗಿದ್ದು, ಲಾರಿ ಮಾಲೀಕರಾದ ರಘು ಹಾಗೂ ಸಂಬಂಧಿ ತಾಲೂಕಿನ ಬೆನ್ನಳಿ ಗ್ರಾಮದ ಮಂಜುನಾಥ್ ನಡುವೆ ಗಲಾಟೆ ನಡೆದಿದೆ. ಈ ವೇಳೆ ಲಾರಿ ಮಾಲಿಕ ರಘು ಜೊತೆ ಮಧ್ಯವರ್ತಿಯಾಗಿ ಬಂದಿದ್ದ ಮಂಜು ಮೇಲೆ ಹಲ್ಲೆ ಮಾಡಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಮಂಜು ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಯಚೂರಿನಲ್ಲಿ ಕಲುಷಿತ ನೀರು ಸೇವಿಸಿ ಮಗು ಸಾವು: ಇನ್ನೊಂದೆಡೆ ಕಲುಷಿತ ನೀರು ಕುಡಿದು ಮಗು ಸಾವನ್ನಪ್ಪಿ, 30 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ಘಟನ ಜಿಲ್ಲೆಯಲ್ಲಿ ನಡೆದಿದೆ. ರಾಯಚೂರಿನ ದೇವದುರ್ಗ ತಾಲೂಕಿನ ರೇಕಲಮರಡಿ ಗ್ರಾಮದ ಜನರು ಕಳೆದ ಎರಡು ದಿನಗಳ ಹಿಂದೆ ಕಲುಷಿತ ನೀರು ಸೇವಿಸಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ. ಘಟನೆಗೆ ಗ್ರಾಮ ಪಂಚಾಯ್ತಿ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರಾಯಚೂರಿನ ರಿಮ್ಸ್ನಲ್ಲಿ ಅನಾರೋಗ್ಯಪೀಡಿತರು ದಾಖಲಾಗಿದ್ದಾರೆ. ರೇಕಲಮರಡಿ ಗ್ರಾಮದ ಮಗು ಕಲುಷಿತ ನೀರಿನ ಸೇವನೆಯ ಪರಿಣಾಮ ವಾಂತಿ ಭೇದಿಯಿಂದ ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಘಟನೆ ತಿಳಿದು ಬರುತ್ತಿದ್ದಂತೆ ಗ್ರಾಮದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲಿಸಿ ಬೀಡುಬಿಟ್ಟಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಡಿಹೆಚ್‌ಒ ಡಾ. ಸುರೇಂದ್ರ ಬಾಬು, ಮಗುವಿನ ಸಾವಿನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಈಗಾಗಲೇ ಗ್ರಾಮದ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದೇವೆ. ಕುಡಿಯುವ ನೀರಿನಿಂದಲೇ ಗ್ರಾಮಸ್ಥರು ಅಸ್ವಸ್ಥರಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಮುಂದಿನ 24 ಗಂಟೆಯವರೆಗೆ ವೈದ್ಯರ ತಂಡವನ್ನು ರೆಕಲಮರಡಿ ಗ್ರಾಮದಲ್ಲಿ ನಿಯೋಜಿಸಲಾಗಿದೆ. ಔಷಧಿ, ಅಗತ್ಯ ವೈದ್ಯಕೀಯ ಸಲಕರಣೆ ಹಾಗೂ ತಾತ್ಕಾಲಿಕವಾಗಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ವಾಂತಿ, ಭೇದಿಯಾದ ಕೂಡಲೇ ಚಿಕಿತ್ಸೆಗೆ ಧಾವಿಸುವಂತೆ ಮನವಿ ಮಾಡಲಾಗಿದೆ. ಕಾಯಿಸಿ, ಆರಿಸಿದ ನೀರು ಕುಡಿಯುವಂತೆ ಸೂಚನೆ ನೀಡಲಾಗಿದೆ. ಡಂಗುರ ಸಾರಿ ಜಾಗೃತಿ ಮೂಡಿಸಲಾಗುವುದು" ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ರಾಯಚೂರಿನಲ್ಲಿ ಕಲುಷಿತ ನೀರು ಸೇವಿಸಿ ಮಗು ಸಾವು; 30ಕ್ಕೂ ಹೆಚ್ಚು ಮಂದಿ ಅಸ್ವಸ್ಥ