ರಾಮನಗರ: ಚಿಕ್ಕಬಳ್ಳಾಪುರ, ಶಿವಮೊಗ್ಗದಲ್ಲಿ ಗಣಿಗಾರಿಕೆ ಸ್ಫೋಟವಾಗಿ 12 ಜನ ಮೃತಪಟ್ಟಿದ್ದಾರೆ. ಮುಖ್ಯಮಂತ್ರಿಗಳು ಈ ಬಗ್ಗೆ ಕಠಿಣ ಕ್ರಮವಹಿಸುತ್ತೇವೆ ಎನ್ನುತ್ತಲೆ ಇದ್ದಾರೆ. ಇದುವರೆಗೂ ಕಠಿಣ ನಿರ್ಧಾರ ತೆಗೆದು ಕೊಳ್ಳುವಲ್ಲಿ ವಿಫಲರಾಗಿದ್ದಾರೆಂದು ವಾಟಾಳ್ ನಾಗರಾಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಐಜೂರು ವೃತ್ತದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಮಾತನಾಡಿದ ವಾಟಾಳ್, ಸಿಎಂ ಒಂದು ಕಡೆ ಕ್ರಮ ಕೈಗೊಳ್ಳುತ್ತೇವೆ ಅಂದ್ರೆ, ಮತ್ತೊಂದೆಡೆ ಸಂಬಂಧಿಸಿದ ಸಚಿವರು ಸಿಐಡಿಗೆ ವಹಿಸುತ್ತೇವೆ ಎನ್ನುತ್ತಾರೆ. ಆದರೆ ಮೃತ ಕುಟುಂಬಕ್ಕೆ ನ್ಯಾಯ ಕೊಡಿಸೋರು ಯಾರು ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಮೃತರಿಗೆ ರೇಟ್ ಫಿಕ್ಸ್ ಮಾಡಿದೆ. ಯಾರೇ ಸತ್ತರು 5 ಲಕ್ಷ ಪರಿಹಾರ ಕೊಡ್ತೇವೆಂದು ಹೇಳ್ತಾರೆ. ಹಾಗಾಗಿ ಇಂತಹ ಅಕ್ರಮಗಳಿಗೆ ತಡೆಯಿಲ್ಲದಂತೆ ಆಗಿದೆ. ಬಹುತೇಕ ರಾಜಕಾರಣಿಗಳು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ. ರಾಜ್ಯದ ಎಲ್ಲಾ ಕಡೆಗಳಲ್ಲಿ ಅವರದ್ದೇ ಭಾಗಿತ್ವ ಇದೆ. ಹಾಗಾಗಿ ಅಕ್ರಮ ಗಣಿಗಾರಿಕೆ ತಡೆಯಲು ಸರ್ಕಾರಕ್ಕೆ ಆಗುತ್ತಿಲ್ಲ ಎಂದು ಹೇಳಿದರು.
ಅಕ್ರಮ ಗಣಿಗಾರಿಕೆ ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈಗಾಗಲೇ ಸರ್ಕಾರ ರಾಜೀನಾಮೆ ಕೊಡಬೇಕಾಗಿತ್ತು. ಈ ಕೂಡಲೇ ಅಕ್ರಮ ಗಣಿಗಾರಿಕೆ ನಡೆಯುವ ಸ್ಥಳಗಳಿಗೆ ಅಧಿಕಾರಿಗಳು ದಾಳಿ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.