ರಾಮನಗರ : ದೇವೇಗೌಡರು ನೀಡಿದ ನಿವೇಶನಗಳಲ್ಲಿ ವಾಸಿಸುತ್ತಿರುವ ಜನತೆಗೆ ಈವರೆಗೂ ಯಾವುದೇ ಅಭಿವೃದ್ದಿ ಯೋಜನೆಗಳನ್ನು ನೀಡಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಹತ್ತು ಕೋಟಿ ರೂ.ಹಣ ನೀಡಿದ್ದು, ಸಮಸ್ಯೆ ಪರಿಹಾರಕ್ಕೆ ಸೂಚಿಸಿದ್ದೆ. ಆದ್ರೆ ಅಧಿಕಾರಿಗಳು ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಹಾಗಾಗಿ, ಕೂಡಲೇ ಸಮಸ್ಯೆ ಬಗೆಹರಿಸುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದರು.
ಸ್ವ ಕ್ಷೇತ್ರ ಚನ್ನಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ನಿನ್ನೆಯಿಂದ ಸುರಿದ ಧಾರಾಕಾರ ಮಳೆಗೆ ಚನ್ನಪಟ್ಟಣ ನಗರದ ಎಪಿಎಂಸಿ ಬಳಿ ಜನಜೀವನ ಅಸ್ತವ್ಯಸ್ತವಾಗಿದೆ. ಮನೆಗಳಿಗೆ ನೀರು ನುಗ್ಗಿ ಅವಾಂತರಗಳನ್ನ ಸೃಷ್ಟಿಸಿದೆ. ನಾನು ಮಾಧ್ಯಮಗಳ ಮುಖಾಂತರ ತಿಳಿದ ಕೂಡಲೇ ಸ್ಥಳ ಪರಿಶೀಲನೆಗಾಗಿ ಬಂದಿದ್ದೇನೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಹತ್ತು ಕೋಟಿ ರೂ. ರಸ್ತೆ ಮತ್ತು ಡ್ರೈನೇಜ್ ವ್ಯವಸ್ಥೆಗಾಗಿ ಬಿಡುಗಡೆ ಮಾಡಿದ್ದೇನೆ ಎಂದರು.
ಕೆಆರ್ಡಿಸಿಎಲ್ನಿಂದ ಕಾಮಗಾರಿ ಕೈಗೆತ್ತಿಕೊಳ್ಳಬೇಕಿದೆ. ದೇವೇಗೌಡರ ಕಾಲದಲ್ಲಿ ಇಲ್ಲಿ ನಿವೇಶನ ಹಂಚಲಾಗಿದೆ. ಅಂದಿನಿಂದ ಈವರೆಗೆ ಯಾವುದೇ ಕೆಲಸಗಳು ಅಭಿವೃದ್ದಿಯಾಗಿಲ್ಲ. ಸ್ವಕ್ಷೇತ್ರ ಚನ್ನಪಟ್ಟಣದ ಕಾಮಗಾರಿಗಳನ್ನು ಅಧಿಕಾರಿಗಳು ಕೈಗೆತ್ತಿಕೊಂಡಿಲ್ಲ. ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ. ನ್ಯಾಷನಲ್ ಹೈವೇ ಸರಿಯಾಗಿ ಕೆಲಸ ನಿರ್ವಹಿಸಿಲ್ಲ, ತಡೆಗೋಡೆ ನಿರ್ಮಾಣ ಮಾಡಿಲ್ಲ , ಮೇಲಿನಿಂದ ಬಂದ ಮಳೆನೀರು ಹೋಗಲು ಕಾಲುವೆ ಚರಂಡಿ ನಿರ್ಮಾಣ ಮಾಡಿಲ್ಲ, ಕೂಡಲೇ ಸರಿಪಡಿಸುವಂತೆ ಸೂಚನೆ ನೀಡಿದ್ದೇನೆ ಎಂದರು.
ನಾನು ಈಗ ಪರಿಸ್ಥಿತಿ ನೋಡಿದ್ದೇನೆ ಮಳೆ ಹೆಚ್ಚಾಗಿದ್ದರಿಂದ ಇನ್ನೂ ಪ್ರತಿ ಮನೆಗಳಲ್ಲಿ ನೀರಿದೆ, ಅವರೇ ಹೊರ ಹಾಕುತ್ತಿದ್ದಾರೆ. ಗೃಹಬಳಕೆ ಪದಾರ್ಥ ಕೂಡ ಉಪಯೋಗಕ್ಕೆ ಇಲ್ಲದಂತೆ ಹಾಳಾಗಿದೆ. ಈಗ ಅಧಿಕಾರಿಗಳಿಗೆ ಸೂಚಿಸಿ ಸರ್ಕಾರದಿಂದ ಪರಿಹಾರ ಹಣ ಕೊಡಿಸುತ್ತೇನೆ. ಅಲ್ಲದೆ ವೈಯಕ್ತಿಕವಾಗಿ ಐದು ಸಾವಿರ ಪ್ರತಿ ಕುಟುಂಬಕ್ಕೆ ನೀಡ್ತೇನೆ. ಅಭಿವೃದ್ಧಿ ಕೆಲಸಕ್ಕೆ ಹಣದ ಕೊರತೆ ಇಲ್ಲ. ಮುಂದೆ ಹೀಗಾಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.