ಚನ್ನಪಟ್ಟಣ(ರಾಮನಗರ) : ಚನ್ನಪಟ್ಟಣ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕಾಡಾನೆಗಳ ಉಪಟಳ ಹೆಚ್ಚುತ್ತಿದೆ. ನಿತ್ಯವೂ ಒಂದೊಂದು ದಿಕ್ಕಿನಿಂದ ಕಾಡಾನೆಗಳು ನಾಡಿಗೆ ನುಗ್ಗುತ್ತಿವೆ. ಆನೆಗಳ ಹಾವಳಿಯಿಂದ ರೈತರ ಬೆಳೆ ನಾಶವಾಗುತ್ತಿದೆ. ಸ್ಥಳೀಯರು ಸೇರಿದಂತೆ ಪ್ರಯಾಣಿಕರೂ ಸಹ ಜೀವ ಭಯದಿಂದ ಸಂಚಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂದು ಚನ್ನಪಟ್ಟಣ ನಗರದ ಅಪ್ಪಗೆರೆ, ಗ್ರಾಮೀಣ ಭಾಗದ ನೀಲಕಂಠನಹಳ್ಳಿ, ಗೋವಿಂದೇಗೌಡನದೊಡ್ಡಿ ಮೂಲಕ ಮುಂಜಾನೆ ಎರಡು ಆನೆಗಳು ಹಾದು ಹೋಗಿವೆ. ಸಿಕ್ಕ ಫಸಲುಗಳನ್ನು ತಿಂದಿದ್ದಲ್ಲದೇ ಬೆಳೆಗಳನ್ನು ತುಳಿದು ನಾಶ ಪಡಿಸಿವೆ.
ಕೂಡ್ಲೂರು ಕೆರೆಯ ಅಂಚಿನಲ್ಲಿ ಹಾದು ಹೋಗಿ ವಾಲೇತೋಪು ಗ್ರಾಮದ ತೋಟವೊಂದರಲ್ಲಿ ಬೀಡು ಬಿಟ್ಟಿವೆ. ಮುಂಜಾನೆ ನಾಲ್ಕು ಗಂಟೆಯಿಂದ ಈ ರಸ್ತೆಗಳಲ್ಲಿ ವಾಯು ವಿಹಾರಕ್ಕೆ ತೆರಳುವವರು, ಕೆಲಸಕ್ಕಾಗಿ ಓಡಾಡುವಂತಹ ಪ್ರಯಾಣಿಕರೂ ಸಹ ಆತಂಕ ಪಡುವಂತಾಗಿದೆ.
ಅರಣ್ಯ ಅಧಿಕಾರಿಗಳು ದೂರು ಬಂದ ಸಮಯದಲ್ಲಿ ಮಾತ್ರ ಪಟಾಕಿ ಸಿಡಿಸಿ ಆನೆಗಳನ್ನು ನೆಲೆನಿಂತ ಜಾಗದಿಂದ ದೂರ ಓಡಿಸಲಷ್ಟೇ ಸೀಮಿತವಾಗುತ್ತಿದ್ದಾರೆ ಎನ್ನುವ ಮಾತುಗಳೂ ಸಹ ಕೇಳಿ ಬಂದಿವೆ. ಕಾಡಿನಿಂದ ನಾಡಿಗೆ ಕಾಡು ಪ್ರಾಣಿಗಳು ಬಾರದಂತೆ ಖೆಡ್ಡಾ ನಿರ್ಮಿಸುವುದನ್ನು ಬಿಟ್ಟು, ನಾಡಿಗೆ ಬಂದ ನಂತರ ಓಡಿಸುವ ನೆಪವನ್ನಷ್ಟೇ ಅರಣ್ಯ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆ ಎನ್ನುವ ಆರೋಪ ಇದೀಗ ಸಾರ್ವತ್ರಿಕವಾಗಿದೆ.
ಆನೆ ಓಡಿಸುವವರೇ ಇಲ್ಲವೇ?
ಈ ಹಿಂದೆ ಆನೆಗಳು ಈ ಮಟ್ಟಿಗೆ ನಾಡಿಗೆ ದಾಂಗುಡಿ ಇಡದಿದ್ದರೂ ಕೂಡ ಆನೆಗಳು ನಾಡಿನತ್ತ ಬರುತ್ತಿವೆ ಅಥವಾ ಬಂದಿವೆ ಎನ್ನುವುದನ್ನು ತಿಳಿದುಕೊಂಡು ನುರಿತ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳ ಚಲನವಲನವನ್ನು ನಿತ್ಯವೂ ಗಮನಿಸಿ, ಅವುಗಳು ನಾಡಿನತ್ತ ಸುಳಿಯದಂತೆ ಕಣ್ಗಾವಲಿಡುತ್ತಿದ್ದರು. ಆದರೆ, ಇಂದು ಅಂತಹ ಪರಿಸ್ಥಿತಿ ಇಲ್ಲ ಎನ್ನುವ ಮಾತುಗಳು ಸಾರ್ವಜನಿಕರಲ್ಲದೇ, ಸ್ವತಃ ಅರಣ್ಯ ಇಲಾಖೆಯ ಹಿರಿಯ ಸಿಬ್ಬಂದಿಯಿಂದಲೂ ಕೇಳಿ ಬರುತ್ತಿದೆ.
ಅರಣ್ಯ ಇಲಾಖೆ ಸಿಬ್ಬಂದಿಯ ವರ್ಗಾವಣೆ?! : ಆನೆಗಳ ಉಪಟಳ ಹೆಚ್ಚಳ, ರೈತರ ಬೆಳೆ ನಷ್ಟ ಮತ್ತು ರೈತರ ಆಕ್ರೋಶಕ್ಕೆ ತುತ್ತಾಗುವ ಕಾರಣಕ್ಕೆ ಅರಣ್ಯ ಇಲಾಖೆ ವಾಚರ್ಗಳಿಂದ ಹಿಡಿದು ಸಹಾಯಕ ವಲಯ ಅರಣ್ಯಾಧಿಕಾರಿಗಳವರೆಗೆ ಎಲ್ಲರೂ ವರ್ಗಾವಣೆ ಮಾಡಿಸಿಕೊಂಡು ಆನೆ ಸಹವಾಸದಿಂದ ಮುಕ್ತಿ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿವೆ. ಇದಕ್ಕೆ ಉದಾಹರಣೆ ಎನ್ನುವಂತೆ ತೆಂಗಿನಕಲ್ಲು ವಲಯ ಅರಣ್ಯ ವ್ಯಾಪ್ತಿಯಲ್ಲಿ ಇಬ್ಬರು ಕಳೆದ ತಿಂಗಳಷ್ಟೇ ವರ್ಗಾವಣೆಗೊಂಡಿದ್ದಾರೆ.
ದಿನ ನಿತ್ಯ ಕಾಡಾನೆಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯ ನೆಪವೊಡ್ಡಿಯಾದರು ವರ್ಗಾವಣೆಗೆ ಬ್ರೇಕ್ ಹಾಕಬೇಕಿತ್ತು. ಆದ್ರೆ, ಆ ಕಾರ್ಯಕ್ಕೆ ಮುಂದಾಗಿಲ್ಲವೆನ್ನುವ ಆರೋಪಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ: ಫರ್ನಾಂಡಿಸ್ ಅಂತಿಮ ದರ್ಶನ ಪಡೆಯಲಿದ್ದಾರೆ ರಾಹುಲ್ ಗಾಂಧಿ: ಡಿ.ಕೆ ಶಿವಕುಮಾರ್
ಇತ್ತೀಚಿಗೆ ಜಮೀನಿನಲ್ಲಿ ಇದ್ದ ಬೆಳೆಯನ್ನು ರಕ್ಷಿಸಲು ರೈತನೋರ್ವ ತಂತಿ ಬೇಲಿ ನಿರ್ಮಿಸಿ ವಿದ್ಯುತ್ ಹರಿಸಿದ್ದರಿಂದ ಒಂದು ಸಲಗ ಸಾವನ್ನಪ್ಪಿತ್ತು. ಹಾಗೂ ಒಂದು ಚಿರತೆ ಬೇಟೆಗಾರನ ಗುಂಡೇಟಿಗೆ ಬಲಿಯಾಗಿತ್ತು. ಮತ್ತೊಂದು ಚಿರತೆ ಮತ್ತು ಆನೆ ಅನುಮಾನಸ್ಪದವಾಗಿ ಸತ್ತು ಬಿದ್ದಿತ್ತು. ಇದರಿಂದ ಪ್ರಾಣಿಗಳಿಗೂ ಸಹ ಮನುಷ್ಯರಿಂದ ತೊಂದರೆ ತಪ್ಪಿದ್ದಲ್ಲ ಎಂದು ಸಾಬೀತಾಗಿದ್ದು, ಇನ್ನಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಗೊಳ್ಳಬೇಕು. ಇಲ್ಲವಾದಲ್ಲಿ ಮನುಷ್ಯರು ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷ ಉಲ್ಭಣಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.