ರಾಮನಗರ : ಮೊದಲ ದಿನದ ಮೇಕೆದಾಟು ಪಾದಯಾತ್ರೆ ರೇಷ್ಮೆ ನಗರಿ ರಾಮನಗರದಿಂದ ಆರಂಭವಾಗಿ 16 ಕಿ.ಮಿ. ಸಂಚರಿಸಿ ಬಿಡದಿ ನಗರ ತಲುಪಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾದ ಎರಡನೇ ಹಂತದ ಮೇಕೆದಾಟು ಪಾದಯಾತ್ರೆಗೆ ಅದ್ಧೂರಿ ಸ್ವಾಗತ ಸಿಕ್ಕಿತು.
ಮೊದಲ ದಿನದಲ್ಲಿ ಹೊರಟ ಪಾದಯಾತ್ರೆಯು ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಸಾಗಿತು. ಜಾನಪದ ಕಲಾ ತಂಡಗಳು ಕೂಡ ಪಾದಯಾತ್ರೆಗೆ ಸಾಥ್ ನೀಡಿದ್ದವು. ನಂತರ ಮಧ್ಯಾಹ್ನ ಮಾಯಗನಹಳ್ಳಿಯಲ್ಲಿ ಭೋಜನ ಮುಗಿಸಿದ ಮುಖಂಡರು, ಸ್ವಲ್ಪ ಸಮಯ ವಿಶ್ರಾಂತಿ ಪಡೆದು ಪಾದಯಾತ್ರೆ ಮುಂದುವರೆಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷ ನಾಯಕ ಸಿದ್ಧರಾಮಯ್ಯ ನೇತೃತ್ವದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ : ಮೇಕೆದಾಟು 2ನೇ ಹಂತದ ಪಾದಯಾತ್ರೆ : 5 ದಿನಗಳ ಕಾಲ ಕಾಂಗ್ರೆಸ್ ಪಾದಯಾತ್ರೆ
ಇಂದು ಬಿಡದಿಯಲ್ಲೇ ಪಾದಯಾತ್ರೆ ಅಂತ್ಯಗೊಳ್ಳಲಿದ್ದು, ಬಿಡದಿಯ ಜಿಕೆವಿಕೆಯಲ್ಲಿ ಪಾದಯಾತ್ರಿಗಳು ವಾಸ್ತವ್ಯ ಹೂಡಲಿದ್ದಾರೆ. ನಂತರ ಇಲ್ಲಿಂದ ನಾಳೆ ಬೆಳಗ್ಗೆ 9 ಗಂಟೆಗೆ ಎರಡನೇ ದಿನದ ಪಾದಯಾತ್ರೆ ಪುನಾರಂಭಗೊಳ್ಳಲಿದೆ.