ರಾಮನಗರ: ನಾನು ಪ್ರೇಮಸಾಯಿ ದೇವಮಾನವ. ಜನರ ಕಷ್ಟಗಳನ್ನು ದೂರ ಮಾಡುತ್ತೇನೆ ಎಂದು ಹೇಳಿಕೊಂಡು ಸಾರ್ವಜನಿಕರಿಗೆ ವಂಚಿಸುತ್ತಿದ್ದ ತಂಡದ ವಿರುದ್ಧ ರಾಮನಗರ ಜಿಲ್ಲೆ ಚನ್ನಪಟ್ಟಣ ನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದ ಕೊಲ್ಲಾಪುರದಿಂದ ಬಂದಿದ್ದ ತಂಡವೊಂದು ಪ್ರೇಮ ಸಾಯಿಬಾಬಾ ಎಂದು ಹೇಳಿಕೊಂಡು ವಂಚಿಸಿರುವ ಬಗ್ಗೆ ಮಹಿಳೆಯೊಬ್ಬರು ದೂರು ನೀಡಿದ್ದರು. ಆರೋಪಿಗಳು ನಾಪತ್ತೆಯಾಗಿದ್ದು, ನಗರದ ಎಂ.ಜಿ. ರಸ್ತೆಯ ಯಶೋದಮ್ಮ ಎಂಬುವರ ಮನೆಯಲ್ಲಿ 8 ತಿಂಗಳಿಂದ ಸಚಿನ್ ಅಕಾರಾಂ ಸರ್ಗರ್ ಎಂಬಾತ ಜನರ ಸಮಸ್ಯೆ ಪರಿಹರಿಸುತ್ತೇನೆ ಎಂದು ನಿತ್ಯ ಬೆಳಗ್ಗೆ ಮತ್ತು ಸಂಜೆ ಪೂಜಾ ಕಾರ್ಯಗಳನ್ನು ಕೈಗೊಳ್ಳುತ್ತಿದ್ದನು. ಈ ಬಗ್ಗೆ ತಿಳಿದ ಹಲವರು ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು.
ಒಂದು ದಿನ ಈ ವ್ಯಕ್ತಿ ಯಶೋದಮ್ಮನ ಮನೆ ಚಿಕ್ಕದಾಗಿದೆ. ಪ್ರತಿ ಗುರುವಾರ ಭಜನೆಗೆ ನಿಮ್ಮ ತೋಟದ ಮನೆಯಲ್ಲಿ ಅವಕಾಶ ಕೊಡುವಂತೆ ಸಿಂಧು ಅವರನ್ನು ಕೋರಿದ್ದಾನೆ. ಇದಕ್ಕೆ ಮನೆಯಿಂದಲೂ ಅನುಮತಿ ದೊರೆತಿದ್ದು, ಸುಮಾರು ಮೂರು ತಿಂಗಳು ಪ್ರತಿ ಗುರುವಾರ ಭಜನೆ ನಡೆಯುತ್ತಿತ್ತು. ನಂತರ, ಆತ ನಗರದ ಎಂ.ಜಿ. ರಸ್ತೆಯಲ್ಲಿರುವ ಯಶೋಧಮ್ಮ ಅವರ ಮನೆಗೆ ತೆರಳುತ್ತಿದ್ದ ಎನ್ನಲಾಗಿದೆ.
ಒಂದು ದಿನ ನಿಮ್ಮ ತೋಟದ ಮನೆ ಬಹಳ ವಿಶಾಲವಾಗಿದೆ. ಅದನ್ನು ಶ್ರೀ ಪ್ರೇಮ ಸ್ವರೂಪಿಣಿ ಸಾಯಿ ಸೇವಾ ಸಮಿತಿ ಟ್ರಸ್ಟ್ಗೆ ದಾನವಾಗಿ ಕೊಡಿ ಎಂದು ಒತ್ತಾಯಿಸಿದ್ದಾನೆ. ಆದರೆ, ದಾನ ಮಾಡಲು ಸಿಂಧು ಪತಿ ನಿರಾಕರಿಸಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಯಾವಾಗ ಗೊತ್ತಾ..!: ಜು.13 ರಂದು ಡಾ.ಸಾಯಿಕುಮಾರಿ, ಕೃಷ್ಣಯ್ಯ ಮತ್ತು ಗಿರೀಶ್ ವಿಜೇಂದ್ರ ಎನ್ನುವವರು ನಗರದಲ್ಲಿ ಆಯೋಜಿಸಿದ್ದ ಗುರು ಪೂರ್ಣಿಮಾ ಕಾರ್ಯಕ್ರಮಕ್ಕೆ ಮಹಾರಾಷ್ಟ್ರದ ಕೊಲ್ಲಾಪುರದಿಂದ ಬಂದಿದ್ದ ಭಕ್ತರು ಸಚಿನ್ ಅಕಾರಾಂ ಸರ್ಗರ್ನನ್ನು ನೋಡುತ್ತಿದ್ದಂತೆ ಈತ ಪ್ರೇಮಸಾಯಿ ಅಲ್ಲ ಎನ್ನುವುದನ್ನು ಖಾತ್ರಿಪಡಿಸಿದ್ದಾರೆ. ಇದಾದ ನಂತರ ಅನುಮಾನಗೊಂಡ ಕೆಲ ಭಕ್ತರು ಕೊಲ್ಲಾಪುರಕ್ಕೆ ತೆರಳಿ ಈತನ ಪೂರ್ವಾಪರ ವಿಚಾರಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ.
ಆದರೆ, ಇಷ್ಟರಲ್ಲಾಗಲೇ ಹಲವರಿಂದ ಹಣ ಪಡೆದುಕೊಂಡು ಮೋಸ ಮಾಡಿದ್ದಾನೆ. ಸ್ವತಃ ದೂರುದಾರರಾದ ಸಿಂಧು 1.5 ಲಕ್ಷ ರೂ., ವೆಂಕಟೇಶ್, ಚನ್ನೇಗೌಡ ಎನ್ನುವವರು ತಲಾ 1 ಲಕ್ಷ ರೂ, ಎಚ್.ಜೆ.ರಾಜೇಶ್ ಎನ್ನುವವರು 2 ಲಕ್ಷ ರೂ.ಗಳನ್ನು ಕೊಟ್ಟು ಮೋಸ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ನಕಲಿ ಫಿಂಗರ್ ಪ್ರಿಂಟ್ ಜಾಲ: ನಾಲ್ವರು ಆರೋಪಿಗಳ ಬಂಧನ