ರಾಮನಗರ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಬಿಡದಿ ಪುರಸಭೆಗೆ ವಾರ್ಡ್ ನಂ.23ರ ಮತಗಟ್ಟೆ ಸಂಖ್ಯೆ 7ರಲ್ಲಿ ಮತದಾನ ಮಾಡಿದರು.
ಮತದಾನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಭಾರಿ ಪೈಪೋಟಿ ಇತ್ತು. ಎಲೆಕ್ಷನ್ನಲ್ಲಿ ನಮ್ಮ ಅಭ್ಯರ್ಥಿಗಳು ಹೆಚ್ಚಿನ ಬಹುಮತದೊಂದಿಗೆ ಗೆಲ್ಲುತ್ತಾರೆ. ಈ ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ನಾನು ಪ್ರಚಾರ ನಡೆಸಿದ್ದೇನೆ.
ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಹೀಗಾಗಿ ಮತದಾರರು ಕೈ ಹಿಡಿಯುತ್ತಾರೆ. ಈ ಬಾರಿ 20ಕ್ಕಿಂತ ಅಧಿಕ ಸ್ಥಾನದಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರದ ವಿರುದ್ಧ ಕಿಡಿ :
ಕೇಂದ್ರ ಸರ್ಕಾರದ ನಿಲುವು ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮನೋಭಾವದ ಬಗ್ಗೆ ಮೊದಲಿನಿಂದಲೂ ವಿರೋಧಿಸಿದ್ದೇನೆ. ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸುವ ಹುನ್ನಾರ ನಡೆಯುತ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಚಿಂತಿಸಬೇಕು. ರಾಜ್ಯದ ಜನರು ಸಹ ಹಿಂದಿ ಹೇರಿಕೆ ವಿರುದ್ಧ ಧ್ವನಿ ಎತ್ತಬೇಕಿದೆ. ಕನ್ನಡ ಉಳಿಸುವ ನಿಟ್ಟಿನಲ್ಲಿ ಹೋರಾಟ ಮಾಡಬೇಕಿದೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಇದು ಹೆಚ್ಚುತ್ತಿದ್ದು, ಹಿಂದಿ ಹೇರಿಕೆ ವಿಚಾರವಾಗಿ ಕೇಂದ್ರದ ನಿಲುವನ್ನು ಖಂಡಿಸುತ್ತೇನೆ. ಕನ್ನಡ ಭಾಷೆಗೆ ಅವಮಾನ ಮಾಡಬೇಡಿ, ಕನ್ನಡಿಗರ ಸ್ವಾಭಿಮಾನವನ್ನು ಕೆಣಕಬೇಡಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದರು.
ಡಿಕೆಶಿ ವಿರುದ್ಧ ಹೆಚ್ಡಿಕೆ ವಾಗ್ದಾಳಿ :
ಕುಮಾರಸ್ವಾಮಿ ಏನೆಂದು ರಾಜ್ಯದ ಜನತೆಗೆ ಗೊತ್ತಿದೆ. ನೀರಾವರಿ ವಿಚಾರವಾಗಿ ದೇವೇಗೌಡರು ಏನು ಕೊಡುಗೆ ನೀಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ರೈತರ ಮಕ್ಕಳೆಂದು ನಾವು ಎದೆ ಮೇಲೆ ಬೋರ್ಡ್ ಹಾಕಿಕೊಂಡಿಲ್ಲ. ಅವರವರ ಕಾರ್ಯ ನೋಡಿ ಜನರೇ ಬಿರುದು ಕೊಡುತ್ತಾರೆ. ಪಂಚೆ ಹಾಕಿಕೊಂಡು ಶೋ ಮಾಡಿದೋರು ರೈತರಾಗಲ್ಲ.
ತಲಕಾವೇರಿಯಲ್ಲಿ ಎಲ್ಲರನ್ನೂ ದೂರ ಕಳುಹಿಸಿ ಕಾವೇರಿಗೆ ಅಕ್ಷತೆ ಹಾಕಿ ಮೆಟ್ಟಲಿಗೆ ನಮಸ್ಕಾರ ಮಾಡಿಕೊಂಡಿದ್ದನ್ನು ನೋಡಿದೆ. ಇವರು ಮೋದಿಯವರನ್ನು ಕಾಪಿ ಮಾಡಿದ್ದಾರೆ. ಇಂತಹ ಆರ್ಟಿಫಿಷಿಯಲ್ ಹೋರಾಟಗಳು ನಡೆಯಲ್ಲ ಎಂದು ಪರೋಕ್ಷವಾಗಿ ಡಿಕೆಶಿ ವಿರುದ್ಧ ಹೆಚ್ಡಿಕೆ ಗುಡುಗಿದರು.
ಮತಕ್ಕಾಗಿ ಪಾದಯಾತ್ರೆ :
ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಹೋರಾಟ ನೋಡಿಲ್ವ, ಕೃಷ್ಣೆ ನೀರನ್ನು ಇವರು ಉಳಿಸಿದ್ದನ್ನು ನೋಡಿದ್ದೇವೆ. ಈಗ ಮೇಕೆದಾಟು ಹೋರಾಟ ಮಾಡ್ತಿದ್ದಾರೆ. ಪಾದಯಾತ್ರೆ ಮೂಲಕ ಸ್ವಾಮೀಜಿಗಳನ್ನು ಕರೆಯುತ್ತಿದ್ದಾರೆ. ಹೋಗಿ ದೆಹಲಿಯಲ್ಲಿ ಉಪವಾಸ ಕುಳಿತುಕೊಳ್ಳಿ, ಕೇಂದ್ರ ಆವಾಗ ಮೇಕೆದಾಟು ಯೋಜನೆ ಪ್ರಾರಂಭಿಸುತ್ತದೆ.
ಅದನ್ನು ಬಿಟ್ಟು ಇಲ್ಲಿ ಹೋರಾಟ ಮಾಡಿದ್ರೆ ಏನು ಪ್ರಯೋಜನವಾಗಲ್ಲ. ಕೇವಲ ಮತಕ್ಕಾಗಿ ನಡೆಯುತ್ತಿರುವ ಪಾದಯಾತ್ರೆ ಅಷ್ಟೇ, ಎಲ್ಲಾ ಸಂದರ್ಭದಲ್ಲಿಯೂ ಜನರನ್ನು ಪರಿವರ್ತಿಸಲು ಆಗಲ್ಲ. ಅದಕ್ಕೆ ಮೂಲ ಉದ್ದೇಶ ಇರಬೇಕು ಎಂದರು.
ಇದನ್ನೂ ಓದಿ : ನೈಟ್ ಕರ್ಫ್ಯೂ : ಸರ್ಕಾರದ ಆದೇಶಕ್ಕೆ ಶಾಸಕ ಸಿ ಟಿ ರವಿ ಅಸಮಾಧಾನ