ರಾಮನಗರ: ಚನ್ನಪಟ್ಟಣ ತಾಲೂಕಿನಾದ್ಯಂತ ಇತ್ತೀಚೆಗೆ ಆನೆಗಳ ದಾಳಿ ಹೆಚ್ಚಾಗಿದ್ದು, ಅದರಲ್ಲೂ ಒಂಟಿ ಸಲಗವೊಂದು ಹಲವಾರು ರೈತರ ಬೆಳೆಯನ್ನು ತಿಂದು ಹಾಕಿದ್ದಲ್ಲದೆ ಹೊಸಕಿ ಹಾಕಿ ಹಾಳುಗೆಡವುತ್ತಿತ್ತು. ಇದೀಗ ಮದವೇರಿದ ಗಜನನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.
ಗುಡ್ಡೆ ಅವ್ವೇರಹಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಒಂಟಿ ಸಲಗವೊಂದು ಇರುವ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಈ ಹಿನ್ನೆಲೆ ಎಚ್ಚೆತ್ತ ಅರಣ್ಯ ಇಲಾಖೆ, ದುಬಾರೆ ಅರಣ್ಯ ಪ್ರದೇಶದಲ್ಲಿನ ಪಳಗಿದ ನಾಲ್ಕು ಆನೆಗಳನ್ನು ಕರೆತಂದು ಕಾರ್ಯಾಚರಣೆ ಕೈಗೊಂಡು ಯಶಸ್ವಿಯಾದರು.
ದುಬಾರೆ ಅರಣ್ಯ ಕ್ಯಾಂಪ್ನಲ್ಲಿನ ಪಳಗಿಸಿದ ನಾಲ್ಕು ಆನೆಗಳನ್ನು ಮಾವುತರ ಸಮೇತ ಲಾರಿಗಳ ಮೂಲಕ ಗುಡ್ಡೆಅವ್ವೇರಹಳ್ಳಿ ಗ್ರಾಮದ ಅರಣ್ಯ ಪ್ರದೇಶಕ್ಕೆ ಕರೆತರಲಾಯಿತು. ಒಂಟಿ ಸಲಗವನ್ನು ಪಳಗಿಸಲು ನಾಲ್ಕು ಆನೆಗಳು ಸಹ ಹರಸಾಹಸ ಪಟ್ಟವು. ನಂತರ ವೈದ್ಯರು ಅರವಳಿಕೆ ಚುಚ್ಚುಮದ್ದು ನೀಡಿದರು. ಇದಾದ ಮೇಲೆ ನಾಲ್ಕು ಆನೆಗಳು ಮತ್ತು ಬೃಹತ್ ಕ್ರೇನ್ ಸಹಾಯದಿಂದ ಒಂಟಿ ಸಲಗವನ್ನು ಲಾರಿಗೆ ತುಂಬಿಕೊಳ್ಳಲಾಯಿತು. ನಂತರ ಎಲ್ಲಾ ಆನೆಗಳನ್ನು ದುಬಾರೆ ಅರಣ್ಯ ಕ್ಯಾಂಪ್ಗೆ ರವಾನಿಸಲಾಯಿತು.
ಕಾರ್ಯಾಚರಣೆ ಸಮಯದಲ್ಲಿ ವಲಯ ಅರಣ್ಯಾಧಿಕಾರಿ ದಿನೇಶ್ ಮತ್ತು ಸಿಬ್ಬಂದಿ, ಅರಣ್ಯ ಇಲಾಖೆಯ ವೈದ್ಯರು, ಉಪ ಪೊಲೀಸ್ ಅಧೀಕ್ಷಕ ಕೆ. ಎನ್. ರಮೇಶ್, ಎಂ. ಕೆ. ದೊಡ್ಡಿ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಸದಾನಂದ ಮತ್ತು ಸಿಬ್ಬಂದಿ ಹಾಜರಿದ್ದರು. ಕಾರ್ಯಾಚರಣೆ ನೋಡಲು ಸಾರ್ವಜನಿಕರು ಮುಗಿಬಿದ್ದಿದ್ದರು. ಪೊಲೀಸ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.
ಓದಿ: ಕೃಷ್ಣಾ ನದಿ ದುರಂತ: ಜಿಲ್ಲಾ ಉಸ್ತುವಾರಿ ಸಚಿವ ಸ್ಥಳಕ್ಕೆ ಬೇಟಿ ನೀಡುವಂತೆ ಅಥಣಿ ಕಾಂಗ್ರೆಸ್ ಆಗ್ರಹ