ರಾಮನಗರ: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನೆಪದಲ್ಲಿ ಮಾನಸಿಕ ಹಿಂಸೆ ನೀಡಿ ಡಿಕೆಶಿ ಅವರನ್ನು ಗಾಣಕ್ಕೆ ಹಾಕಿ ಅರೆದಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇಡಿ ವಿಚಾರಣೆ ವೇಳೆ ಡಿಕೆಶಿ ಅವರಿಗೆ ಅನಾರೋಗ್ಯ ಸಮಸ್ಯೆ ಉಲ್ಬಣಿಸಿತ್ತು. ಹೀಗಿದ್ದರೂ, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿ ನೀಡುವಂತೆ ವೈದ್ಯರ ಬಳಿ ಅಧಿಕಾರಿಗಳು ಮನವಿ ಮಾಡಿದ್ದರು. ಇದು ಅಮಾನೀಯ ಕೃತ್ಯ. ವಿಚಾರಣೆ ನೆಪದಲ್ಲಿ ಜಾರಿ ನಿರ್ದೇಶನಾಲಯ ಮತ್ತೊಬ್ಬರ ಸಾವಿಗೂ ಕಾರಣವಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
ಮಾಜಿ ಶಾಸಕ ಬಾಲಕೃಷ್ಣ ಮಾತನಾಡಿ, ಡಿಕೆಶಿ ಅವರ ಪಾಲಿಗೆ ಕೋರ್ಟ್ ಇದೆ. ನಮಗೆ ನ್ಯಾಯ ದೊರೆಯಲಿದೆ. ಡಿಕೆಶಿ ಅವರಿಗೆ ಮನೋಸ್ಥೈರ್ಯ ತುಂಬುವ ಕೆಲಸವನ್ನು ನಾವು ಮಾಡುತ್ತೇವೆ ಎಂದರು. ಅಮಿತ್ ಶಾಗೆ ಸಮನಾಗಿ ಡಿ.ಕೆ ಶಿವಕುಮಾರ್ ಅವರು ಬೆಳೆಯುತ್ತಿದ್ದಾರೆ ಎಂಬ ಆತಂಕ ಕೇಂದ್ರ ಬಿಜೆಪಿಗಿದೆ. ಹೀಗಾಗಿ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ಹೆಚ್.ಸಿ.ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.