ರಾಮನಗರ: ಅವತ್ತು ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ವಿಶ್ವಾಸ ಮತಯಾಚನೆ ಬಗ್ಗೆ ಚರ್ಚೆ ನಡೆಯುತ್ತಿತ್ತು. ನಿಮಗೆಲ್ಲ ಈಗಲ್ಲ, ಮುಂದೈತೆ ಊರ ಹಬ್ಬ. ಅಖಾಡಕ್ಕೆ ಬನ್ನಿ ನೋಡಿಕೊಳ್ಳುತ್ತೇನೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಗುಟುರು ಹಾಕಿದ್ದರು. ಈಗ ಉಪಚುವಾಣೆಯೇನೋ ಬಂದಿದೆ. ಆದರೆ, ಡಿಕೆಶಿ ಈಗ ತಿಹಾರ್ ಜೈಲಿನಲ್ಲಿದ್ದಾರೆ.
ಎಂಟಿಬಿ, ನಿನ್ನ- ನನ್ನ ಭೇಟಿ ರಣಾಂಗಣದಲ್ಲಿ, ನನಗೂ ನಿನಗೂ ಯುದ್ಧ ಎಂದೆಲ್ಲಾ ಸಮ್ಮಿಶ್ರ ಸರ್ಕಾರ ಉರುಳಲು ಕಾರಣರಾದ ಅತೃಪ್ತ ಶಾಸಕರ ವಿರುದ್ಧ ತೊಡೆ ತಟ್ಟಿ, ರಣಕಹಳೆ ಊದಿ ಚುನಾವಣೆಯ ಯುದ್ಧಕ್ಕೆ ಅಂದೇ ಆಹ್ವಾನಿಸಿದ್ದರು ಡಿಕೆಶಿ.
ಇತ್ತ ರಾಜ್ಯದ 15 ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆಯಾಗಿದೆ. ಈ ನಡುವೆ ರಣಾಂಗಣಕ್ಕೆ ಆಹ್ವಾನ ನೀಡಿದ್ದ ಡಿಕೆಶಿ ಅಖಾಡಕ್ಕೆ ಬರುತ್ತಾರೆ ಅನ್ನೋದು ಅನುಮಾನ. ಕಾಂಗ್ರೆಸ್ನ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಜಾರಿ ನಿರ್ದೇಶನಾಲಯದ ಹಿಡಿತದಿಂದ ಇದೀಗ ತಿಹಾರ್ ಜೈಲಿನಲ್ಲಿದ್ದಾರೆ. ಅವರಿಗೆ ಸದ್ಯಕ್ಕೆ ಬೇಲ್ ಸಿಗುವ ಸಾಧ್ಯತೆ ಕೂಡ ಕಡಿಮೆ ಎನ್ನಲಾಗುತ್ತಿದೆ.
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಉರುಳಲು ಒಟ್ಟು 15 ಮಂದಿ ಶಾಸಕರೇ ಕಾರಣರಾಗಿದ್ದರು. ಇದರಲ್ಲಿ 12 ಕಾಂಗ್ರೆಸ್, ಮೂವರು ಜೆಡಿಎಸ್ ಶಾಸಕರಿಗೆ ಡಿಕೆಶಿ ಖಡಕ್ ವಾರ್ನಿಂಗ್ ನೀಡಿದ್ದರು. ಉಪಚುನಾವಣೆ ಘೋಷಣೆಯಾಗಲಿ, ನಿಮಗೆಲ್ಲಾ ಕಾದಿದೆ ಎಂದಿದ್ದರು. ಬಳಿಕ ಅಕ್ರಮ ಆಸ್ತಿ ಸಂಪಾದನೆ ಆರೋಪ ಹಿನ್ನೆಲೆಯಲ್ಲಿ ಡಿಕೆಶಿ ಇಡಿ ವಶದಲ್ಲಿದ್ದಾರೆ. ಸಂಸದ ಡಿ.ಕೆ. ಸುರೇಶ್ ಸಹ ಸಹೋದರ ಇಂದಲ್ಲಾ ನಾಳೆ ಹೊರಬರುತ್ತಾರೆ ಎಂದು ಅವರ ಆಗಮನಕ್ಕಾಗಿ ಎದುರು ನೋಡುತ್ತ ದೆಹಲಿಯಲ್ಲಿಯೇ ಬೀಡು ಬಿಟ್ಟಿದ್ದಾರೆ. ಈ ನಡುವೆ ಉಪಚುನಾವಣೆ ಘೋಷಣೆಯಾಗಿದೆ. ಹೀಗಾಗಿ ಒಂದೆಡೆ ಅತೃಪ್ತ ಶಾಸಕರು ಹಾಗೂ ಬಿಜೆಪಿಯವರು ಡಿ ಕೆ ಬ್ರದರ್ಸ್ ಚುನಾವಣಾ ಅಖಾಡಕ್ಕೆ ಬರುವುದೇ ಇಲ್ಲ ಎಂಬ ಖುಷಿಯಲ್ಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಜಾಮಿನು ಪಡೆದು ಬೆಂಗಳೂರಿಗೆ ಬಂದರೂ, ಚುನಾವಣಾ ಅಖಾಡಲ್ಲಿ ಈ ಮೊದಲಿನಂತೆ ಓಡಾಡಲಿದ್ದಾರೆಯೇ? ಎಂಬ ಪ್ರಶ್ನೆ ಕೂಡ ಕಾಡುತ್ತಿದೆ. ಚುನಾವಣೆಗೆ ಡಿಕೆಶಿ ಕೈ ಹಾಕದಿದ್ದರೆ ತಂತ್ರಗಳನ್ನು ಹೆಣೆಯುವುದಾದರೂ ಹೇಗೆ? ಎಂಬ ಚಿಂತೆಯಲ್ಲಿ ಕಾಂಗ್ರೆಸ್ ಮುಳುಗಿದೆ. ಮತ್ತೊಂದೆಡೆ 15 ಕ್ಷೇತ್ರಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿರುವುದು ವಿಶೇಷವಾಗಿದ್ದು, ಕಾಂಗ್ರೆಸ್ಗೆ ಗೆ ಬಿಸಿ ತುಪ್ಪವಾದ್ರೆ ಬಿಜೆಪಿಗೆ ಮೃಷ್ಟಾನ್ನ ಎನ್ನುವಂತಾಗಿದೆ.