ರಾಮನಗರ: ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹೇಳಿದರು. ಸಚಿವರು, ಕಾಂಗ್ರೆಸ್ ಶಾಸಕರು ಮತ್ತು ಪ್ರಮುಖ ಕಾರ್ಯಕರ್ತರು ಸಿಎಂ ಸ್ಥಾನ ಸೇರಿದಂತೆ ಪಕ್ಷದ ವಿಚಾರಗಳ ಬಗ್ಗೆ ಬಹಿರಂಗ ಹೇಳಿಕೆ ಕೊಡುವುದು, ಚರ್ಚೆ ಮಾಡಬಾರದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ ಖಡಕ್ ಎಚ್ಚರಿಕೆ ಕೊಟ್ಟಿದ್ದರು. ಇದಾದ ನಂತರವೂ ಪ್ರಮುಖರು ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿಯೇ ಪ್ರಕಟಿಸುತ್ತಿದ್ದಾರೆ. ರಾಮನಗರ ಕಾಂಗ್ರೆಸ್ ಶಾಸಕರೂ ಸಹ ಪ್ರತಿಕ್ರಿಯಿಸಿ, ಡಿಕೆಶಿ ಪರ ಬ್ಯಾಟಿಂಗ್ ಮಾಡಿದ್ದಾರೆ.
ಒಂದೂವರೆ ವರ್ಷದ ಬಳಿಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು. ಅವರು ಮುಖ್ಯಮಂತ್ರಿ ಆಗಬೇಕೆನ್ನುವುದು ನಮ್ಮ ಆಸೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು. ಡಿಕೆಶಿ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಶಕ್ತಿ ಮೀರಿ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಹಾಗಾಗಿ ಡಿಕೆಶಿಗೆ ಅವಕಾಶ ಸಿಗಲೇಬೇಕು. ರಾಜ್ಯದ ಜನತೆ ಕೂಡಾ ಅದನ್ನೇ ಬಯಸಿದ್ದಾರೆ ಎಂದರು.
ಇದನ್ನೂ ಓದಿ: ಸಿಎಂ ಅಧಿಕಾರ ಹಂಚಿಕೆ ಬಗ್ಗೆ ನನಗೇನೂ ಗೊತ್ತಿಲ್ಲ: ಸಚಿವ ಡಾ ಎಚ್ ಸಿ ಮಹದೇವಪ್ಪ
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡುವವರು ಕೆಲಸಕ್ಕೆ ಬಾರದವರು ಎಂಬ ಸಿಎಂ ಸಿದ್ದರಾಮಯ್ಯ ಮಾತಿಗೆ ಬೇಸರ ವ್ಯಕ್ತಪಡಿಸಿ, ಇಲ್ಲಿ ಕೆಲಸಕ್ಕೆ ಬಾರದವರು ಯಾರೂ ಇಲ್ಲ. ಎಲ್ಲರೂ ಕೆಲಸಕ್ಕೆ ಬರುವವರೇ. ನಮ್ಮನ್ನೂ ಶಾಸಕ ಅಂತ ಕರೆಯುತ್ತಾರೆ. ಕೀಳಾಗಿ ಮಾತನಾಡಬಾರದು ಎಂದು ಹೇಳಿದರು.
ಬೆಂಗಳೂರಿನ ರಾಜ್ಯ ಒಕ್ಕಲಿಗರ ಸಂಘದ ಕೇಂದ್ರ ಕಚೇರಿ ಬಳಿ ಗುರುವಾರ ಮಾತನಾಡಿರುವ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಹೇಳಿಕೆಯ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಹೈಕಮಾಂಡ್ ಹೇಳಿದ್ದನ್ನು ಪಾಲಿಸುವುದಷ್ಟೇ ನಮಗೆ ಗೊತ್ತು ಎಂದಿದ್ದರು.
ಐದು ವರ್ಷ ನಮ್ಮದೇ ಸರ್ಕಾರ ಇರುತ್ತದೆ. ಮುಂದಿನ 5 ವರ್ಷ ನಾನೇ ಸಿಎಂ ಆಗಿ ಮುಂದುವರೆಯುವೆ. ಡಿಸಿಎಂ ವಿಚಾರವಾಗಿ ತೀರ್ಮಾನ ಮಾಡುವುದು ಹೈಕಮಾಂಡ್. ನಮ್ಮದು ನ್ಯಾಷನಲ್ ಪಾರ್ಟಿ, ಏನೇ ತೀರ್ಮಾನವಿದ್ದರೂ ಹೈಕಮಾಂಡ್ ಜೊತೆ ಚರ್ಚೆ ಮಾಡಿದ ಬಳಿಕವೇ ಆಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: '5 ವರ್ಷ ನಾನೇ ಸಿಎಂ' ಎಂಬ ಸಿದ್ದರಾಮಯ್ಯ ಹೇಳಿಕೆಗೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ಹೀಗಿತ್ತು