ರಾಮನಗರ: ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ನೀವೆಲ್ಲಾ ಭಾರಿ ಬಹುಮತದೊಂದಿಗೆ ನನನ್ನು ಹಾಗೂ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೀರಿ. ಹೈಕಮಾಂಡ್ ಆದೇಶದ ಮೇರೆ ಸಿಎಂ ಹುದ್ದೆ ಬಿಡಬೇಕಾಯಿತು. ಮುಂದಿನ ದಿನಗಳಲ್ಲಿ ಎಐಸಿಸಿ ನಿರ್ಧಾರ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನಾನು ಮುಂದೆ ಸಿಎಂ ಆಗಲಿದ್ದೇನೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಇದೇ ಪ್ರಥಮ ಭಾರಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಉಪ ಮುಖ್ಯಮಂತ್ರಿ ಆದ ಬಳಿಕ ಸ್ವ ಕ್ಷೇತ್ರಕ್ಕೆ ಆಗಮಿಸಿದ್ದು, ಈ ವೇಳೆ ಹಾರೋಹಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡುತ್ತಿದ್ದರು. ಹಾರೋಹಳ್ಳಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನಿಚ್ಚಳ ಬಹುಮತದ ಕಾಂಗ್ರೆಸ್ ಸರ್ಕಾರ ಬಂದಿದೆ. ರಾಜ್ಯದಲ್ಲಿ ಈಗಾಗಲೇ ಜೆಡಿಎಸ್ ಪಕ್ಷದ ಶಕ್ತಿ ಏನು ಎಂಬುದನ್ನು ನೀವೆಲ್ಲಾ ನೋಡಿದ್ದೀರಾ.. ಎರಡು ಭಾರಿ ಆ ಪಕ್ಷಕ್ಕೆ ಅಧಿಕಾರ ನೀಡಿದ್ದೀರಾ. ಇಂದು ನೀವೆಲ್ಲ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ರಾಜ್ಯ ಹಾಗೂ ಕ್ಷೇತ್ರದಲ್ಲಿ ಭಾರಿ ಬಹುಮತದೊಂದಿಗೆ ನನ್ನನ್ನು ಗೆಲ್ಲಿಸಿದ್ದೀರಿ ಎಂದು ಹೇಳಿದ್ದಾರೆ.
ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ನಿರ್ದೇಶನದ ಮೇರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಮುಂದಿನ ದಿನಗಳಲ್ಲಿ ನಿಮ್ಮ ಆಸೆ ಕೂಡ ಈಡೇರಲಿದೆ. ಕಾಂಗ್ರೆಸ್ ಹೈಕಮಾಂಡ್ ಮುಂದಿನ ದಿನಗಳಲ್ಲಿ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಪರೋಕ್ಷವಾಗಿ ಮುಂದಿನ ದಿನಗಳಲ್ಲಿ ಸಿಎಂ ಆಗುತ್ತೇನೆ ಎಂದು ಡಿಕೆಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ಹಲವೆಡೆ ರೋಡ್ ಶೋ ನಡೆಸಿದ ಅವರು ವೇದಿಕೆಯಲ್ಲಿ ಮುಖ್ಯಮಂತ್ರಿ ಆಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಹಾರೋಹಳ್ಳಿ, ಶಿವನಹಳ್ಳಿ, ಸಾತನೂರು, ದೊಡ್ಡ ಆಲಹಳ್ಳಿ, ಕೋಡಿಹಳ್ಳಿ ಸೇರಿದಂತೆ ಹಲವು ಕಡೆಯಲ್ಲಿ ರೋಡ್ ಶೋ ಕಾರ್ಯಕರ್ತರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಚುನಾವಣೆ ನಡೆದು ಎರಡನೇ ದಿನಕ್ಕೆ ಫಲಿತಾಂಶ ಬಂತಾದರೂ, ಗೆದ್ದ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಯಾರು ಎಂಬ ಗೊಂದಲ ಕೆಲವು ದಿನಗಳವರೆಗೆ ಬಗೆಹರಿದಿರಲಿಲ್ಲ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿರೀಕ್ಷೆಗೂ ಮೀರಿ 135 ಸ್ಥಾನಗಳನ್ನು ಗೆದ್ದು ಜಯಭೇರಿ ಸಾಧಿಸಿದ್ದರು. ಭರ್ಜರಿ ಜಯಗಳಿಸಿದ ಬೆನ್ನಲ್ಲೇ ಪಕ್ಷದಲ್ಲಿ ಸಿಎಂ ಕುರ್ಚಿಯಲ್ಲಿ ಕೂರುವವರು ಯಾರು ಎನ್ನುವ ಪ್ರಶ್ನೆಗಳು ಎದ್ದಿತ್ತು. ಸಿಎಂ ಆಕಾಂಕ್ಷಿಗಳು ಕೆಲವರಿದ್ದರೂ, ಮುಖ್ಯವಾಗಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೆಸರುಗಳು ಮುಂಚೂಣಿಯಲ್ಲಿದ್ದವು.
ಇಬ್ಬರೂ ತಾವು ಪಕ್ಷದ ಬೆಳವಣಿಗೆ, ಈ ಬಾರಿ ಚುನಾವಣೆಯಲ್ಲಿ ಸಾಧಿಸಿರುವ ಗೆಲುವಿನಲ್ಲಿ ತಮ್ಮ ಪಾಲು ಎಷ್ಟಿದೆ ಎನ್ನುವುದನ್ನೇ ವಿಷಯವಾಗಿಸಿಕೊಂಡು, ತನಗೇ ಸಿಎಂ ಪಟ್ಟ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಹೈಕಮಾಂಡ್ಗೂ ಇಬ್ಬರನ್ನು ಸಂಭಾಳಿಸುವುದು ಕೊಂಚ ಕಷ್ಟವೇ ಆಗಿತ್ತು. ಆದರೆ ಕೊನೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ತಮ್ಮ ಹಠದಿಂದ ಸ್ವಲ್ಪ ಸಡಿಲಿಕೆಗೊಂಡು, ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಪಟ್ಟ ಕೊಟ್ಟು ತಮಗೆ ಉಪ ಮುಖ್ಯಮಂತ್ರಿ ಪಟ್ಟ ಕೊಟ್ಟರೂ ಪರವಾಗಿಲ್ಲ ಎಂದರು. ಕೊನೆಗೆ ಡಿಸಿಎಂ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು. ಇದೀಗ ಮಾಧ್ಯಮದ ಜೊತೆ ಡಿಕೆಶಿ ನೀಡಿರುವ ಹೇಳಿಕೆ ಗಮನಿಸಿದರೆ, ಹೈಕಮಾಂಡ್ 50 - 50 ನಿಯಮ ಪಾಲಿಸಲಿದೆ ಎನ್ನುವ ಹಿಂಟ್ ದೊರೆತಂತಿದೆ. ಅರ್ಧ ಸಿದ್ದರಾಮಯ್ಯ ಹಾಗೂ ಇನ್ನರ್ಧ ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲಿದ್ದಾರೆ ಎನ್ನುವ ಊಹಾಪೋಹದ ಮಾತುಗಳು ನಿಜವಾಗುವಂತೆ ಕಾಣುತ್ತಿದೆ.
ಇದನ್ನೂ ಓದಿ: ಬಿಎಸ್ವೈ ನಿವಾಸಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ: ಗೇಟ್ವರೆಗೂ ಬಂದು ಸ್ವಾಗತ ಕೋರಿದ ಯಡಿಯೂರಪ್ಪ