ರಾಮನಗರ: ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನಾನು ಮೊದಲು ಅಭಿನಂದನೆ ಸಲ್ಲಿಸುತ್ತೇನೆ. ಇಡೀ ಪ್ರಕರಣದ ಸಂಬಂಧ ಸಂಪೂರ್ಣವಾಗಿ ತನಿಖೆಯಾಗಬೇಕು ಎಂದು ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಒತ್ತಾಯಿಸಿದ್ದಾರೆ.
ಜಿಲ್ಲೆಯ ಕನಕಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ನಾನು ಪೊಲೀಸ್ ಆಯುಕ್ತರಿಗೆ ಸಿಡಿಯನ್ನು ನೀಡಿದ್ದೇನೆ. ಆ ಸಿಡಿಯಲ್ಲಿ ಸತ್ಯಾಂಶ ಇರುವುದರಿಂದ ನೈತಿಕತೆಯಲ್ಲಿ ಸಿಎಂ ರಾಜೀನಾಮೆ ಪಡೆದಿದ್ದಾರೆ ಎಂದರು.
ರಮೇಶ್ ಜಾರಕಿಹೊಳಿ ತನಿಖೆಯ ಮೇಲೆ ಪ್ರಭಾವ ಬೀರಲ್ಲ ಅಂತಾ ಅಂದುಕೊಂಡಿದ್ದೇನೆ. ನಾನು ಉಚ್ಚನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತೇನೆ. ನನ್ನ ಹೋರಾಟ ಮುಂದುವರೆಯುತ್ತದೆ. ನಾನು ಕಾನೂನು ಪರವಾಗಿ ಹೋರಾಟ ಮಾಡುತ್ತೇನೆ. ಇನ್ನೂ ಕೂಡ ಬಹಳ ಅಕ್ರಮಗಳು ಇವೆ, ಮುಂದೆ ಎಲ್ಲವನ್ನೂ ಹೇಳುತ್ತೇನೆ ಎಂದು ತಿಳಿಸಿದರು.
ಇಂತಹ ಗಂಭೀರ ಪ್ರಕರಣಗಳು ಮತ್ತಷ್ಟು ನನ್ನ ಬಳಿ ಇವೆ. ಕೆಲವು ಪ್ರಭಾವಿ ನಾಯಕರು ಹಾಗೂ ಸಚಿವ ಸಂಪುಟದಲ್ಲಿರುವವರದ್ದು ಸೇರಿದೆ. ಮುಂದೆ ಇದರ ಬಗ್ಗೆ ಮಾತನಾಡುತ್ತೇನೆ ಎಂದ ಅವರು, ನನಗೆ ಈಗಾಗಲೇ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಈ ಬಗ್ಗೆ ರಾಮನಗರ ಎಸ್ಪಿಗೆ ದೂರು ನೀಡುತ್ತಿದ್ದೇನೆ ಎಂದಿದ್ದಾರೆ.