ರಾಮನಗರ: ಹೆಚ್.ಡಿ.ಕುಮಾರಸ್ವಾಮಿ ಅವರೇ ನೀವು ಗೊಂದಲಕ್ಕೆ ಒಳಗಾಗಬೇಡಿ. ನಿಮಗೆ ಅರ್ಥ ಆಗಿಲ್ಲ ಅಂದರೆ ಸದನದಲ್ಲೇ ಅರ್ಥೈಸುವ ಕೆಲಸ ಮಾಡೋಣ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಮಾಜಿ ಸಿಎಂ ಹೆಚ್ಡಿಕೆ ಪಂಚ ಪ್ರಶ್ನೆಗಳಿಗೆ ಟಾಂಗ್ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಸರ್ಕಾರಕ್ಕೆ ವರ್ಷ ತುಂಬಿದ ಸಂಭ್ರಮ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಯಾರಿಗೂ ಯಾವುದೇ ಗೊಂದಲವಿಲ್ಲ. ಇದ್ದರೆ ಅದು ಕುಮಾರಸ್ವಾಮಿ ಅವರಿಗೆ ಇರಬೇಕು. ಆಡಳಿತ ಕೂಡ ನಡೆಸಿದ್ದಾರೆ. ಅವರಿಗೆ ಅರಿವಿರಬೇಕಿತ್ತು. ನಾವು ಸ್ಪಷ್ಟ ದಾಖಲೆ ಇಟ್ಟುಕೊಂಡು ಉತ್ತರ ಕೊಟ್ಟಿದ್ದೇವೆ ಎಂದರು.
ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರವು ನಾಲ್ಕಾರು ಗಂಭೀರ ಸಮಸ್ಯೆಗಳ ಜೊತೆಗೆ ಯಶಸ್ವಿ ನಿರ್ವಹಣೆಯಲ್ಲಿ ಗೆದ್ದಿದೆ. ತಾತ್ಕಾಲಿಕ ಸುಧಾರಣೆಗಿಂತ ಶಾಶ್ವತ ಸುಧಾರಣೆಯ ದೃಷ್ಟಿಯಲ್ಲಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಾಗಿದೆ. ಭ್ರಷ್ಟಾಚಾರಕ್ಕೆ ಆದ್ಯತೆ ನೀಡದೆ ವ್ಯವಸ್ಥಿತವಾಗಿ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಹಿಂದೆ ಯಾರೂ ಮಾಡದ್ದನ್ನು ನಾವು ಮಾಡಿ ತೋರಿಸುತ್ತೇವೆ. ಜಿಲ್ಲೆಯ ಅಭಿವೃದ್ಧಿಗೆ ಯಾರೂ ಪ್ರಯತ್ನಿಸಿಲ್ಲ. ನಾವು ಹತ್ತಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದೇವೆ. ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ ಎಂದು ಹೆಚ್ಡಿಕೆ ಹಾಗೂ ಡಿಕೆ ಬ್ರದರ್ಸ್ಗೆ ಪರೋಕ್ಷವಾಗಿ ಅಭಿವೃದ್ಧಿ ಶೂನ್ಯರು ಎಂದು ಟೀಕಿಸಿದರು.