ರಾಮನಗರ: ಕನ್ನಮಂಗಲ ಗ್ರಾಮದಲ್ಲಿ ಬಹಳಷ್ಟು ಸಮಸ್ಯೆಗಳಿದ್ದು, ಆದ್ಯತೆ ಮೇರೆಗೆ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ತಿಳಿಸಿದರು.
ಕನ್ನಮಂಗಲ ಗ್ರಾಮದಲ್ಲಿ ಆಯೋಜಿಸಲಾಗಿದ್ದ 'ಜಿಲ್ಲಾಧಿಕಾರಿಗಳ ನಡೆ, ಹಳ್ಳಿ ಕಡೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚರ್ಚೆಯಿಂದ ಪ್ರಯೋಜನವಿಲ್ಲ, ಜಿಲ್ಲಾಧಿಕಾರಿಗಳು ಬಂದರು ಹೋದರು ಎನ್ನುವ ರೀತಿಯಾಗಬಾರದು. ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಿ, ಅದರ ಆಧಾರದ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳುವ ಬಗ್ಗೆ ಆದೇಶಿಸಲಾಗುವುದು ಎಂದರು.
ಗ್ರಾಮದಲ್ಲಿ ಬಹಳಷ್ಟು ಜನರು ಪೌತಿ ಖಾತೆ ಸಮಸ್ಯೆಯನ್ನು ಪರಿಹರಿಸಿಕೊಡುವಂತೆ ಮನವಿ ಸಲ್ಲಿಸಿದರು. ದೊಡ್ಡಮಣ್ಣುಗುಡ್ಡೆ ಸರ್ವೆ ನಂ. 1ಕ್ಕೆ ಸಂಬಂಧಿಸಿದಂತೆ ರಾಜ್ಯ ಅರಣ್ಯ ಇಲಾಖೆಯಿಂದ ಯಾವುದೇ ವಿವಾದವಿಲ್ಲ. ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಸ್ಥಳ ಹಸ್ತಾಂತರ ಮಾಡಲು, ಕಡತವನ್ನು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಕಡತ ಬಂದ ನಂತರ ಡಿನೋಟಿಫಿಕೇಷನ್ ಮಾಡಿ, ಖಾತೆಗೆ ಹೆಸರು ಸೇರಿಸುವ ಕೆಲಸ ಮಾಡಲಾಗುವುದು ಎಂದರು.
ಕಂದಾಯ ಗ್ರಾಮ: ಗ್ರಾಮದಲ್ಲಿ 100 ಕುಟುಂಬವಿದ್ದು, 250ಕ್ಕೂ ಹೆಚ್ಚಿನ ಜನಸಂಖ್ಯೆಯಿದೆ. ಅರಣ್ಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಪರಿಹಾರವಾದ ತಕ್ಷಣ ಕಂದಾಯ ಗ್ರಾಮವಾಗಿ ಪರಿವರ್ತಿಸಲಾಗುವುದು. ಗ್ರಾಮದಲ್ಲಿ, ಶಾಲೆ, ಡೈರಿ, ಸಮುದಾಯ ಭವನ ಮತ್ತಿತರ ಅವಶ್ಯಕತೆಯ ಬಗ್ಗೆ ಚರ್ಚೆ ನಡೆಸಿ, ಯೋಜನೆ ಸಿದ್ದಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಅರ್ಜಿ ನೀಡಲು ಬಂದವರಿಗೆ ಲಸಿಕೆ ಜಾಗೃತಿ: ಅರ್ಜಿ ಸಲ್ಲಿಸಲು ಬಂದ ಬಹಳಷ್ಟು ಗ್ರಾಮಸ್ಥರು ವಯಸ್ಸಾದವರಾಗಿದ್ದು, ಅವರಿಗೆ ಕೋವಿಡ್ ಲಸಿಕೆ ಪಡೆದಿರುವ ಬಗ್ಗೆ ವಿಚಾರಿಸಿ, ಪಡೆಯದಿದ್ದಲ್ಲಿ ಪಡೆದುಕೊಳ್ಳುವಂತೆ ಪ್ರೇರೇಪಿಸಿದರು.
ರಸ್ತೆಗಾಗಿ ಅರ್ಜಿ: ಗ್ರಾಮದ ವಿವಿಧ ಭಾಗದಲ್ಲಿ ಕಾಂಕ್ರೀಟ್ ರಸ್ತೆ ಮಾಡಿಕೊಡುವಂತೆ ಗ್ರಾಮಸ್ಥರು ಅರ್ಜಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ನರೇಗಾ ಯೋಜನೆಯಡಿ ಗ್ರಾಮದ ಒಳಭಾಗದಲ್ಲಿರುವ ರಸ್ತೆಯನ್ನು ಹಂತ-ಹಂತವಾಗಿ ಮಾಡಿಕೊಡುವುದಾಗಿ ತಿಳಿಸಿದರು.
ನಳ ಸಂಪರ್ಕ: ಗ್ರಾಮ ಸಭೆ ನಡೆಸಿ ನಳ ಒದಗಿಸುವಂತೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಕಳುಹಿಸಿದರೆ, ಜಲಜೀವನ್ ಮಿಷನ್ ಎರಡನೇ ಹಂತದಲ್ಲಿ ಕನ್ನಮಂಗಲ ಗ್ರಾಮವನ್ನು ಆಯ್ಕೆ ಮಾಡಿ ನಳ ಒದಗಿಸಲಾಗುವುದು ಎಂದರು.
ಆಧಾರ್ ತಿದ್ದುಪಡಿ: ಶಿವಲಿಂಗಮ್ಮ ಎಂಬುವವರು ತಮಗೆ 63 ವರ್ಷವಾಗಿದ್ದು, ಆಧಾರ್ ಕಾರ್ಡ್ನಲ್ಲಿ ವಯೋಮಿತಿ ಸರಿಯಾಗಿ ನಮೂದಾಗಿರದ ಕಾರಣ ವೃದ್ಧಾಪ್ಯ ವೇತನ ದೊರಕುತ್ತಿಲ್ಲ ಎಂದು ಮನವಿ ಸಲ್ಲಿಸಿದರು. ವೈದ್ಯರು ಪರಿಶೀಲಿಸಿ ಅವರ ವಯಸ್ಸಿನ ದೃಢೀಕರಣ ಪತ್ರ ತಿದ್ದುಪಡಿ ಮಾಡುವಂತೆ ಅಧಿಕಾರಿಗಳಿಗೆ ಡಿಸಿ ತಿಳಿಸಿದರು.