ಬೆಂಗಳೂರು: ರಾಮನಗರ ಕೋವಿಡ್ ಮುಕ್ತ ಜಿಲ್ಲೆಯಾಗಿದ್ದು, ಈ ಪ್ರದೇಶದಲ್ಲಿ ಹೋಟೆಲ್ ಗಳನ್ನು ತೆರೆಯಲು ಅವಕಾಶ ಮಾಡಿಕೊಡಬೇಕು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ. ಕೆ. ಸುರೇಶ್ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.
ಮಂಗಳವಾರ ವಿಡಿಯೋ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ ಸಂಸದರು, ಮುಖ್ಯಮಂತ್ರಿಗಳೇ ರಾಮನಗರ ಜಿಲ್ಲೆಯನ್ನು ನೀವು ಹಸಿರು ವಲಯವನ್ನಾಗಿ ಘೋಷಿಸಿದ್ದೀರಿ. ಆದರೂ ಜಿಲ್ಲೆಯಲ್ಲಿ ಈವರೆಗೂ ಹೋಟೆಲ್ ಗಳಿಂದ ತಿಂಡಿಯನ್ನು ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗುತ್ತಿಲ್ಲ. ಈ ವಿಚಾರವಾಗಿ ನಾನು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದರೂ ಅವಕಾಶ ದೊರಕುತ್ತಿಲ್ಲ. ಇದರಿಂದ ಹಳ್ಳಿಗಳಿಂದ ಪಟ್ಟಣಕ್ಕೆ ಬಂದ ಜನರಿಗೆ ತಿನ್ನಲು ಏನು ಸಿಗದೆ ಪರದಾಡುವಂತಾಗಿದೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು, ಸಿಎಂ ಅವರೇ ತಾವು ಮುಖ್ಯ ಕಾರ್ಯದರ್ಶಿದರ್ಶಿಗಳಿಗೆ ಆದೇಶ ನೀಡಿ ನನ್ನ ಕ್ಷೇತ್ರ ರಾಮನಗರ ಹಾಗೂ ತುಮಕೂರು ಭಾಗಳಲ್ಲಿ ಹೋಟೆಲ್ ಸೇವೆಗಳು ನಡೆಯುವಂತೆ ಅವಕಾಶ ಕಲ್ಪಿಸಿಕೊಡಬೇಕು ಎಂದು ನಾನು ನಿಮಗೆ ವಿನಂತಿ ಮಾಡುತ್ತೇನೆ ಎಂದು ಕೋರಿದ್ದಾರೆ.