ರಾಮನಗರ: ಹಾಡಹಗಲೇ ಸಿನಿಮೀಯ ಶೈಲಿಯಲ್ಲಿ ಬಾಲಕಿಗೆ ಚಾಕುವಿನಿಂದ ಇರಿದು ಅಪಹರಣ ಮಾಡಿದ ಘಟನೆ ರೇಷ್ಮೆನಗರಿ ರಾಮನಗರದ ಕಾಲೇಜುವೊಂದರ ಬಳಿ ಇಂದು ಬೆಳಗ್ಗೆ ನಡೆದಿತ್ತು. ಸ್ವಲ್ಪ ಸಮಯದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಕಿಡ್ನಾಪ್ ಆಗಿದ್ದ ಬಾಲಕಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ. ಕಾರಿನಲ್ಲಿ ಅಪಹರಣ ಮಾಡುವ ಮೊದಲು ಆಕೆಯ ಕೈ ಹಾಗೂ ಭುಜದ ಭಾಗಕ್ಕೆ ಚಾಕುವಿನಿಂದ ಹಲ್ಲೆ ಮಾಡಿರುವ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಏನಿದು ಪ್ರಕರಣ: ಸ್ಥಳಕ್ಕೆ ರಾಮನಗರ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಸ್ಥಳೀಯರಿಂದಲೂ ಮಾಹಿತಿ ಕಲೆಹಾಕುತ್ತಿದ್ದಾರೆ. ಮಾಹಿತಿ ಪ್ರಕಾರ, ಕನಕಪುರದ ದಾಳಿಂಬ ಗ್ರಾಮದ ವಿದ್ಯಾರ್ಥಿನಿ ಎಂದಿನಂತೆ ಇಂದು ಬೆಳಗ್ಗೆ ತನ್ನ ಸಹಪಾಠಿಗಳೊಂದಿಗೆ ಕಾಲೇಜಿಗೆ ಹೋಗುತ್ತಿದ್ದಳು. ಬಾಲಕಿ ಕಾಲೇಜು ಪ್ರವೇಶದ್ವಾರಕ್ಕೆ ಬರುತ್ತಿದ್ದಂತೆ ಕಾರಲ್ಲಿ ಬಂದ ಗುಂಪಿನ ಪೈಕಿ ಓರ್ವನು ಬಾಲಕಿಗೆ ಚಾಕುವಿನಿಂದ ಇರಿದಿದ್ದಾನೆ. ನೋವಿನಿಂದ ಕುಸಿದ ಬಾಲಕಿಯನ್ನು ಕಾರಿನೊಳಕ್ಕೆ ಎಳೆದು ಪರಾರಿಯಾಗಿದ್ದಾರೆ. ಘಟನೆ ಗಮನಿಸಿದ ಸ್ಥಳದಲ್ಲಿದ್ದವರು ಕಾರಿಗೆ ಕಲ್ಲು ತೂರಿ ತಡೆಯಲು ಯತ್ನಿಸಿದ್ದಾರೆ. ಆದರೂ, ಕಾರು ನಿಲ್ಲಿಸದೆ ಬಾಲಕಿಯನ್ನು ಅಪಹರಿಸಿ ಸ್ಥಳದಿಂದ ಕಾಲ್ಕಿತ್ತಿದ್ದರು. ಬಾಲಕಿ ಕಿಡ್ನಾಪ್ ಆಗಿದ್ದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದರು.
ಬಾಲಕಿ ಆಸ್ಪತ್ರೆಗೆ ದಾಖಲು: ಘಟನೆ ನಡೆದು ಸ್ವಲ್ಪ ಸಮಯದ ಬಳಿಕ ಯುವಕನಿಂದ ಚಾಕು ಇರಿತಕ್ಕೊಳಗಾಗಿ ಅಪಹರಿಸಲ್ಪಟ್ಟ ವಿದ್ಯಾರ್ಥಿನಿ ಸ್ಥಳೀಯ ರಾಮಕೃಷ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕೃತ್ಯ ಎಸಗಿದ ಯುವಕ ಸಹ ಆಸ್ಪತ್ರೆಯಲ್ಲಿ ಕಂಡುಬಂದಿದ್ದು, ಈತ ದಾಳಿಂಬ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.
ಅಪಹರಣದ ಬಳಿಕ ಯುವಕ ಅದೇ ಕಾರಿನಲ್ಲಿ ಯುವತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ವಿಷಯ ಗೊತ್ತಾಗುತ್ತಿದ್ದಂತೆ ಪೊಲೀಸರು ಆಸ್ಪತ್ರೆಗೆ ತೆರಳಿ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಪಹರಣಕ್ಕೆ ಬಳಸಿದ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ. ಆಸ್ಪತ್ರೆಯಲ್ಲಿರುವ ಯುವತಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಎಸ್ಪಿ ಪ್ರತಿಕ್ರಿಯೆ: ''ಬೆಳಗ್ಗೆ 9 ಗಂಟೆ ಸುಮಾರಿಗೆ ರಾಮನಗರದ ಜೂನಿಯರ್ ಕಾಲೇಜು ಬಳಿ 17 ವರ್ಷದ ವಿದ್ಯಾರ್ಥಿನಿಯ ಅಪಹರಣ ಮಾಡಲಾಗಿತ್ತು. ಚೇತನ್ ಎಂಬ ಯುವಕ ಕಾರಿನಲ್ಲಿ ಬಂದು ವಿದ್ಯಾರ್ಥಿನಿಗೆ ಗುದ್ದಿ, ಚಾಕುವಿನಿಂದ ಇರಿದು ಗಾಯಗೊಳಿಸಿ ಅಪಹರಿಸಿಕೊಂಡು ಹೋಗಿದ್ದ. ಮಾಹಿತಿ ಬಳಿಕ ಕಾರಿನ ಜಿಪಿಎಸ್ ಆಧಾರದ ಮೇಲೆ ಪತ್ತೆ ಮಾಡಿದ್ದೇವೆ. ರಾಮಕೃಷ್ಣ ಆಸ್ಪತ್ರೆ ಬಳಿ ಕಾರಿರುವ ಮಾಹಿತಿಯಂತೆ ಸ್ಥಳಕ್ಕೆ ಬಂದಾಗ ಆರೋಪಿ ಪತ್ತೆಯಾಗಿದ್ದು, ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ಹುಡುಗಿಯನ್ನು ಇಷ್ಟಪಟ್ಟ ಬಗ್ಗೆ ಹೇಳಿದ್ದಾನೆ. ಸದ್ಯ ವಿದ್ಯಾರ್ಥಿನಿಯ ಆರೋಗ್ಯ ಸಹಜ ಸ್ಥಿತಿಯಲ್ಲಿದೆ. ಎರಡ್ಮೂರು ದಿನಗಳ ಚಿಕಿತ್ಸೆ ಬೇಕೆಂದು ವೈದ್ಯರು ತಿಳಿಸಿದ್ದಾರೆ. ಇಬ್ಬರಿಗೂ ಎರಡು ಮೂರು ವರ್ಷಗಳಿಂದ ಪರಿಚಯವಿತ್ತು ಎಂಬ ಮಾಹಿತಿ ಇದೆ. ಈ ಬಗ್ಗೆ ತನಿಖೆ ಮುಂದುವರೆದಿದೆ'' ಎಂದು ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
ಓದಿ: ಪರೀಕ್ಷೆಯಲ್ಲಿ ಕಡಿಮೆ ಅಂಕ: 5 ಗಂಟೆಯೊಳಗೆ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ!