ರಾಮನಗರ : ಎಟಿಎಂ ಸೆಂಟರ್ ಗಳಲ್ಲಿ ಗ್ರಾಹಕರ ಡೆಬಿಟ್ ಕಾರ್ಡ್ ಗಳ ಮಾಹಿತಿ ಸಂಗ್ರಹಿಸಿ ನಕಲಿ ಎಟಿಎಂ ಕಾರ್ಡ್ ಸೃಷ್ಟಿ ಮಾಡಿಕೊಂಡು ಹಣ ಡ್ರಾ ಮಾಡಿ ಗ್ರಾಹಕರಿಗೆ ಮೋಸ ಮಾಡುತ್ತಿದ್ದ ಕುಖ್ಯಾತ ಆರೋಪಿಗಳನ್ನು ಬಂಧನ ಮಾಡುವಲ್ಲಿ ರಾಮನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೂವರು ಹೊರ ದೇಶದ ಪ್ರಜೆಗಳ ಜೊತೆಗೆ ಇಬ್ಬರು ಅಂತರರಾಜ್ಯ ಕಳ್ಳರನ್ನ ಬಂಧಿಸಿದ್ದಾರೆ. ನೈಜೀರಿಯಾ ದೇಶದ ಇರ್ಮಾನ್ ಸ್ಮಾರ್ಟ್, ಹೂಡೊ ಕ್ರಿಸ್ಚಿಯನ್, ಟ್ಯಾನ್ಸಾನಿಯಾ ದೇಶದ ಮ್ಯಾಥಿಸ್ ಶಾ ಹಾಗೂ ಮಹಾರಾಷ್ಟ್ರದ ಪೂಣೆಯ ಪ್ರಶಾಂತ್, ಅವಿನಾಶ್ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 1.66.930 ನಗದು, ಎರಡು ಕಾರು, 2 ಲ್ಯಾಪ್‌ಟಾಪ್ ಗಳು, ಸ್ಕಿಮ್ಮಿಂಗ್ ಮಷಿನ್ ಗಳು ಸೇರಿದಂತೆ ಮಾರಕಾಸ್ತ್ರಗಳನ್ನ ವಶ ಪಡಿಸಿಕೊಳ್ಳಲಾಗಿದೆ. ಬಂಧಿತರ ವಿರುದ್ಧ ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ 6 ಪ್ರಕರಣ, ರಾಮನಗರದ ಸೈಬರ್ ಠಾಣೆಯಲ್ಲಿ 13 ಪ್ರಕರಣಗಳು ಸೇರಿದಂತೆ ಬೆಂಗಳೂರು ನಗರದ ಸೈಬರ್ ಪೊಲೀಸ್ ಠಾಣೆಗಳಲ್ಲಿ 11 ಪ್ರಕರಣಗಳು, ಮೈಸೂರು ನಗರದ 5 ಪ್ರಕರಣಗಳು ದಾಖಲಾಗಿದ್ದವು.
ಈ ಬಂಧಿತ ಆರೋಪಿಗಳು ವಿವಿಧ ಎಟಿಎಂ ಸೆಂಟರ್ಗಳಿಗೆ ಹೋಗಿ ಸ್ಕಿಮ್ಮಿಂಗ್ ಮಷಿನ್ ಮತ್ತು ಕ್ಯಾಮೆರಾವನ್ನು ಅಳವಡಿಸಿ ಅವುಗಳ ಮುಖಾಂತರ ಗ್ರಾಹಕರ ಎಟಿಎಂ ಡೆಬಿಟ್ ಕಾರ್ಡ್ ನಂಬರ್ ಹಾಗೂ ಗ್ರಾಹಕರು ಬಳಸುವ ಪಿನ್ ನಂಬರ್ ಗಳನ್ನ ಪಡೆದುಕೊಂಡು ಸದರಿ ಡೇಟಾವನ್ನು ಸಂಬಂಧಪಟ್ಟ ಅಪ್ಲಿಕೇಷನ್ ಬಳಸಿ ಲ್ಯಾಪ್ ಟಾಪ್ ನಲ್ಲಿ ಅಳವಡಿಸಿಕೊಂಡು ನಕಲಿ ಡೆಬಿಟ್ ಕಾರ್ಡ್ ಗಳನ್ನ ತಯಾರಿಸಿ ಬೇರೆ ಕಡೆಗಳಲ್ಲಿನ ಎಟಿಎಂಗಳಲ್ಲಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದರು.
ಕಳೆದ ಮೂರು ದಿನಗಳ ಹಿಂದೆ ಖಚಿತ ಮಾಹಿತಿ ಆಧರಿಸಿ ಮೈಸೂರಿನಿಂದ ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕನಕಪುರ ಸರ್ಕಲ್ ನಲ್ಲಿ ಕಾರು ಅಡ್ಡಗಟ್ಟಿ ಆರೋಪಿಗಳನ್ನ ಖುದ್ದು ಎಸ್ ಪಿ ಅನೂಪ್ ಶೆಟ್ಟಿ ಹಾಗೂ ಸಿಬ್ಬಂದಿ ಬಂಧಿಸಿದ್ದಾರೆ. ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ಹಾರೋಹಳ್ಳಿ ಸಿಪಿಐ ಸತೀಶ್, ಕಗ್ಗಲೀಪುರ ಪಿಎಸ್ ಐ ಗೋವಿಂದ ಹಾಗೂ ಸಿಬ್ಬಂದಿಗೆ ಜಿಲ್ಲಾ ಎಸ್ ಪಿ ಅನೂಪ್ ಎ.ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.