ಚನ್ನಪಟ್ಟಣ: ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ಕೊಟ್ಟ ಎಂಎಲ್ಸಿ ಸಿ.ಪಿ.ಯೋಗೇಶ್ವರ್, ಸಮಯ ಬಂದಾಗ ಕುಮಾರಸ್ವಾಮಿ ಬಗ್ಗೆ ಮಾತನಾಡುತ್ತೇನೆ. ಮುಂದಿನ ದಿನಗಳಲ್ಲಿ ಇದಕ್ಕೆಲ್ಲ ಉತ್ತರ ಕೊಡುತ್ತೇನೆ. ಅವರ ಅಸ್ತಿತ್ವಕ್ಕೆ ಅವರು ಬಡಿದಾಡುತ್ತಿದ್ದಾರೆ. ನಾನು ಕ್ಷೇತ್ರ ಉಳಿಸಿಕೊಳ್ಳಲು ಹೋರಾಡುತ್ತಿದ್ದೇನೆ. ಹಾಗಾಗಿ ಅವರು ನನ್ನನ್ನ ಹೊಗಳಲು ಆಗುತ್ತಾ, ಇಂದ್ರಚಂದ್ರ ಎನ್ನೋಕೆ ಆಗುತ್ತಾ ಎಂದು ಪ್ರಶ್ನಿಸಿದರು.
ಅಚಾನಕ್ಕಾಗಿ ಎರಡು ಬಾರಿ ಸಿಎಂ ಆದವರು. ಹಾಗಾಗಿ ಹಗುರವಾಗಿ ಮಾತನಾಡೋದನ್ನ ಬಿಡಿ. ನನಗೆ ಅವರಿಗಿಂತಲೂ ಚೆನ್ನಾಗಿ ಮಾತನಾಡಲು ಬರುತ್ತದೆ. ಮುಂದೆ ಗಂಭೀರವಾಗಿ ಮಾತನಾಡಲು ಕಲಿತುಕೊಳ್ಳಲಿ. ಯಾರ ದಾಖಲೆ ಇಟ್ಟುಕೊಂಡಿದ್ದಾರೆಂದು ಅವರನ್ನೇ ಕೇಳಬೇಕು ಚನ್ನಪಟ್ಟಣದಲ್ಲಿ ಯೋಗೇಶ್ವರ್ ತಿರುಗೇಟು ನೀಡಿದರು.
ಸಚಿವ ಸ್ಥಾನದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿ.ಪಿ.ಯೋಗೇಶ್ವರ್, ನನಗೆ ಸಚಿವ ಸ್ಥಾನದ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಮುಖ್ಯಮಂತ್ರಿಗಳು ಈ ಹಿಂದೆ ಸಚಿವ ಸ್ಥಾನ ಕೊಡುತ್ತೇವೆ ಎಂದು ಹೇಳಿದ್ದರು. ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಆದರೆ ಈವರೆಗೆ ನನಗೆ ಅಧಿಕೃತ ಮಾಹಿತಿಯಿಲ್ಲ. ಮಾಹಿತಿ ಬಂದ ನಂತರ ಮಾತನಾಡುತ್ತೇನೆ. ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಧೀರನು ಅಲ್ಲ. ಹಾಗಾಗಿ ಸ್ಥಾನ ಸಿಗಲಿ ನಂತರ ಮಾತನಾಡುತ್ತೇನೆ. ಊಹಾಪೋಹದ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ಸಚಿವ ಸ್ಥಾನದ ಬಗ್ಗೆ ಖುಷಿ ಪಡುವುದಲ್ಲ, ಅದು ಜವಾಬ್ದಾರಿ ಎಂದು ಹೇಳಿದರು.
ಇದನ್ನೂ ಓದಿ: ‘ಆ ಎಸಿ ನನಗೆ 3 ಕೋಟಿ ರೂ.ಗೆ ಆಫರ್ ಕೊಟ್ಟಿದ್ದರು’: ಸಿ.ಪಿ.ಯೋಗೇಶ್ವರ್ ವಿರುದ್ಧ ಹೆಚ್ಡಿಕೆ ವಾಗ್ದಾಳಿ