ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ಭಾವ ಮಹದೇವಯ್ಯ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಮುರುಗನ್ ಎಂಬವನನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದ್ದು, ಈತ ಕಳೆದ ಹಲವು ವರ್ಷಗಳಿಂದ ಮಹದೇವಯ್ಯರ ಪಕ್ಕದ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದನು.
ಮುರುಗೇಶ್ (40) ತಮಿಳುನಾಡಿನ ಇನ್ನಿಬ್ಬರು ಸ್ನೇಹಿತರ ಸಹಕಾರದಿಂದ ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಮುರುಗೇಶ್ ಈ ಹಿಂದೆ ಯೋಗೇಶ್ವರ್ ಸಹೋದರ ಗಂಗಾಧರ್ ಎಂಬವರ ತೋಟದ ಕಾವಲುಗಾರನಾಗಿದ್ದ. ಮಹದೇವಯ್ಯನವರ ತೋಟದ ಪಕ್ಕದಲ್ಲಿದ್ದ ಈ ತೋಟದಲ್ಲಿ ಪತ್ನಿಸಮೇತ ನೆಲೆಸಿದ್ದ. ಆದರೆ, ಈತನನ್ನು ಕೆಲಸದಿಂದ ಇತ್ತೀಚಿಗೆ ತೆಗೆದುಹಾಕಲಾಗಿತ್ತು.
ಹಣಕ್ಕಾಗಿ ಕೊಲೆ: ಈ ಹಿಂದೆ ಇಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಮುರುಗೇಶ್, ಮಹದೇವಯ್ಯ ಅವರ ವಿಶ್ವಾಸ ಗಳಿಸಿದ್ದ. ಜಮೀನು ಮಾರಿರುವ ಹಿನ್ನೆಲೆಯಲ್ಲಿ ಮಹದೇವಯ್ಯನವರ ಬಳಿ ಅಪಾರ ಹಣವಿರುವುದನ್ನು ಗಮನಿಸಿದ್ದ ಮುರುಗನ್ ತಮಿಳುನಾಡಿನ ತನ್ನಿಬ್ಬರು ಸ್ನೇಹಿತರ ಜೊತೆ ಸೇರಿ ಈ ಕೃತ್ಯ ಎಸಗಿದ್ದಾನೆ. ಹಣದ ಅವಶ್ಯಕತೆಯಿದ್ದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಕಲಬುರಗಿ: ಹಿಟ್ ಅಂಡ್ ರನ್: ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯನ ತಾಯಿ ಸಾವು