ರಾಮನಗರ: ಪಾದರಾಯನಪುರ ಗಲಾಟೆ ವಿಚಾರದಲ್ಲಿ ಬಂಧಿತರಾಗಿದ್ಧ 121 ಜನ ಆರೋಪಿಗಳನ್ನು ಮೊನ್ನೆಯಷ್ಟೇ ರಾಮನಗರ ಜೈಲಿಗೆ ಕರೆತರಲಾಗಿತ್ತು. ಅವರಲ್ಲಿ, ಇದೀಗ ಇಬ್ಬರು ಆರೋಪಿಗಳಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಇಲ್ಲಿಯವರೆಗೂ ಗ್ರೀನ್ ಜೋನ್ ನಲ್ಲಿದ್ದ ರಾಮನಗರಕ್ಕೆ ಇದೀಗ ಕೊರೊನಾ ಕಂಟಕ ಎದುರಾಗಿದೆ.
ಪಾದರಾಯನಪುರ ಪುಂಡರನ್ನು ರಾಮನಗರಕ್ಕೆ ಶಿಫ್ಟ್ ಮಾಡಲು ಸರ್ಕಾರ ಚಿಂತಿಸಿದಾಗ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಅದಕ್ಕೆ ಪುಷ್ಟಿ ನೀಡುವಂತೆ ಇದೀಗ ಇಬ್ಬರು ಆರೋಪಿಗಳಲ್ಲಿ ಕೊರೊನಾ ಸೋಂಕು ಕಂಡುಬಂದಿರುವುದು ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿಸಿದೆ.
ಸದ್ಯ ಸೋಂಕಿತರನ್ನು ಬೆಂಗಳೂರಿನ ವಿಕ್ಟೋರಿಯಾಗೆ ಶಿಫ್ಟ್ ಮಾಡಲು ಸಿದ್ಧತೆ ನಡೆದಿದೆ. ಈ ಸಂಬಂಧ ಜಿಲ್ಲಾಧಿಕಾರಿ ಎಂ. ಎಸ್. ಅರ್ಚನಾ ಸಭೆ ನಡೆಸುತ್ತಿದ್ದಾರೆ. ಇಬ್ಬರ ಜೊತೆಗಿದ್ದ ಇತರರಿಗೂ ಸೋಂಕು ಹರಡಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ರಾಮನಗರ ಜೈಲಿನ ಎಲ್ಲಾ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲು ನಿರ್ಧರಿಸಲಾಗಿದೆ.
ಇಂದು ಜೈಲಿಗೆ ಮಾಸ್ಕ್, ಸ್ಯಾನಿಟೈಸರ್ ಕೊಡಲು ಹೋಗಿದ್ದ ನಗರಸಭೆಯ ಸಿಬ್ಬಂದಿಯನ್ನು ಕೂಡ ಕ್ವಾರಂಟೈನ್ ಮಾಡುವ ಸಾಧ್ಯತೆ ಇದೆ. ಇನ್ನೂ ಆರೋಪಿಗಳನ್ನು ಕರೆತರುವಾಗ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಲ್ಲ. ಬೇಜವಾಬ್ದಾರಿ ವಹಿಸಿ ತಮ್ಮ ಪ್ರಾಣಕ್ಕೆ ಕುತ್ತು ತಂದೊಡ್ಡಿದ್ದಾರೆ ಎಂದು ಜೈಲು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.