ರಾಮನಗರ: ಈ ಬಾರಿ ಕನಕಪುರದ ಕಾಂಗ್ರೆಸ್ ಅಭ್ಯರ್ಥಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೆ ವಿರೋಧಿ ಅಲೆ ಇದೆ. ಹಾಗಾಗಿ ನಾವು ಗೆಲ್ಲುವ ವಾತಾವರಣ ಇದೆ ಎಂದು ಕಂದಾಯ ಸಚಿವ, ಬಿಜೆಪಿ ಅಭ್ಯರ್ಥಿ ಆರ್ ಅಶೋಕ್ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ಜಿಲ್ಲೆಯ ಕನಕಪುರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನಕಪುರದಲ್ಲಿ ಬಿಜೆಪಿಗೆ ಬೂತ್ ಏಜೆಂಟ್ ಇಲ್ಲ ಎಂದು ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ಕನಕಪುರ ಡಿ ಕೆ ಶಿವಕುಮಾರ್ ಅವರ ಕಪಿ ಮುಷ್ಠಿಯಲ್ಲಿದೆ. ಅದರಿಂದ ಜನರು ಹೊರಗಡೆ ಬರಲು ತೀರ್ಮಾನ ಮಾಡಿದ್ದಾರೆ. ಎಲ್ಲಾ ಬೂತ್ಗಳಲ್ಲೂ ಕೂಡ ನಮ್ಮ ಏಜೆಂಟ್ಗಳು ಇರುತ್ತಾರೆ. ಕಾಂಗ್ರೆಸ್ ಮತಗಳು ಕೂಡ ಬಿಜೆಪಿಗೆ ಬರಲಿದೆ ಎಂದರು.
ಸೂಕ್ಷ್ಮ ಮತಗಟ್ಟೆಗಳಲ್ಲಿ ಬಿಎಸ್ಎಫ್ ನಿಯೋಜನೆ ವಿಚಾರವಾಗಿ ಮಾತನಾಡಿ, ಈ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಸೂಕ್ತ ಭದ್ರತೆಯೊಂದಿಗೆ ಚುನಾವಣೆ ನಡೆಯಲಿದೆ ಎಂದರು. ಕನಕಪುರದಲ್ಲಿ 8ನೇ ದಿನ ಚುನಾವಣಾ ಪ್ರಚಾರಕ್ಕೆ ಬಂದಿದ್ದೇನೆ. ಸಂಘಟನೆ ಉದ್ದೇಶದಿಂದ ಪಕ್ಷ ಇಲ್ಲಿ ನನ್ನನ್ನು ಕಣಕ್ಕಿಳಿಸಿದೆ. ಇದೇ 8 ರಂದು ಅಮಿತ್ ಶಾ ಅವರು ಕನಕಪುರಕ್ಕೆ ಆಗಮಿಸುವ ಸಾಧ್ಯತೆ ಇದೆ. ನಾಳೆ ಸಂಸದ ತೇಜಸ್ವಿ ಸೂರ್ಯ ಬಂದು ಪ್ರಚಾರ ಮಾಡುತ್ತಾರೆ ಎಂದು ಮಾಹಿತಿ ನೀಡಿದರು.
ಬಜರಂಗದಳ ಬ್ಯಾನ್ ವಿಚಾರವಾಗಿ ವಾಗ್ದಾಳಿ ನಡೆಸಿದ ಅಶೋಕ್: ಬಜರಂಗದಳ ನಿಷೇಧ ವಿಚಾರದಿಂದ ಕಾಂಗ್ರೆಸ್ ಇನ್ನಷ್ಟು ಸ್ಥಾನ ಕಳೆದುಕೊಳ್ಳುತ್ತಾರೆ. ಹಿಂದೂ ರಕ್ಷಣೆ ಮಾಡುವವವರು ಬಜರಂಗದಳದವರು. ದೇಶ, ದೇವಸ್ಥಾನಗಳನ್ನು ರಕ್ಷಣೆ ಮಾಡೋದು ಬಜರಂಗದಳ. ಕಾಂಗ್ರೆಸ್ ಅವರು ಬಜರಂಗದಳವನ್ನು ಪಿಎಫ್ಐಗೆ ಹೋಲಿಸುವುದನ್ನು ನಾನು ಖಂಡಿಸುತ್ತೇನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ ಎಲ್ಲ ಕಡೆ ಪ್ರತಿಭಟನೆ ನಡೆಯುತ್ತಿದೆ. ಎಲ್ಲಾ ಕಡೆ ಹನುಮಾನ್ ಚಾಲೀಸಾ ಪಠಣೆ ಮಾಡಲಾಗುತ್ತದೆ. ಕಾಂಗ್ರೆಸ್ ದೇಶದಲ್ಲಿ ಸರ್ವನಾಶವಾಗುತ್ತದೆ ಎಂದು ಅಶೋಕ್ ಭವಿಷ್ಯ ನುಡಿದರು.
ರಾಜಕೀಯಕ್ಕೆ ಬರುವ ಮೊದಲು ನಾನು ಬಜರಂಗದಳದ ಕಾರ್ಯಕರ್ತ. ಈಗಲೂ ಕೂಡ ನಾನು ಬಜರಂಗದಳದಲ್ಲಿ ಇದ್ದೇನೆ. ಎಲ್ಲರೂ ಕೂಡ ಆರ್ಎಸ್ಎಸ್ ಬಜರಂಗದಳದಿಂದ ಬಂದಿರೋದು. ನಿಮಗೆ ತಾಕತ್ತು, ಧಮ್ ಇದೆಯಾ ಬಜರಂಗದಳ ಬ್ಯಾನ್ ಮಾಡೋಕೆ.?, ಕಾಂಗ್ರೆಸ್ ಸಂಸ್ಕೃತಿ ಪಾಕಿಸ್ತಾನಕ್ಕೆ ಜೈ ಅನ್ನುವ ಸಂಸ್ಕಾರ ನಮ್ಮದಲ್ಲ. ಹಾಗೆಯೇ ಕಾಂಗ್ರೆಸ್ನವರು ಆಂಜನೇಯನ ಬಾಲಕ್ಕೆ ಬೆಂಕಿ ಇಟ್ಟಿದ್ದೀರಿ. ಇದು ಇಡೀ ಕಾಂಗ್ರೆಸ್ ಅನ್ನು ಸುಟ್ಟು ಸರ್ವನಾಶ ಮಾಡುತ್ತದೆ. ಕನಕಪುರದಲ್ಲಿ ಮುನೇಶ್ವರ ಬೆಟ್ಟವನ್ನು ಏಸು ಶಿಲುಬೆ ಮಾಡೋಕೆ ಹೊರಟಿದ್ದರು. ಇದೀಗ ಆಂಜನೇಯನ ಸುದ್ದಿಗೆ ಬಂದಿದ್ದೀರಿ. ಮುಂದಿನ ದಿನಗಳಲ್ಲಿ ಮಹಿಳೆಯರು ಕುಂಕುಮ ಇಡೋದಕ್ಕೂ ಇವರು ಬಿಡೊಲ್ಲ ಎಂದು ಸಚಿವ ಅಶೋಕ್ ಕಿಡಿಕಾರಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರನ್ನು ವಿಷ ಸರ್ಪ ಎಂದಿದ್ದಾರೆ. ಒಬ್ಬ ಪ್ರಧಾನಿ ಬಗ್ಗೆ ಮಾತನಾಡಬೇಕಾದರೆ ಯೋಚನೆ ಮಾಡಬೇಕು. ಇಷ್ಟೊಂದು ಕೀಳು ಮಟ್ಟದ ರಾಜಕಾರಣ ಮಾಡಬಾರದು. ಈ ಎಲ್ಲಾ ಕಾಂಗ್ರೆಸ್ ನಾಯಕರ ಹೇಳಿಕೆಯಿಂದ ಕಾಂಗ್ರೆಸ್ ಅದೋಗತಿಗೆ ಬಂದಿದೆ. ದೇಶ ಕಾಂಗ್ರೆಸ್ ಮುಕ್ತ ಭಾರತ ಆಗಲಿದೆ ಎಂದು ಆರ್.ಅಶೋಕ್ ಹೇಳಿದ್ರು.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಎಸ್ಡಿಪಿಐ ಮತ್ತು ಪಿಎಫ್ಐ ಕಪಿ ಮುಷ್ಟಿಯಲ್ಲಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯ