ರಾಮನಗರ: ಮಹತ್ವಾಕಾಂಕ್ಷಿ ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್ ಸಜ್ಜಾಗುತ್ತಿದೆ. ಸದ್ಯ ಡಿ.ಕೆ.ಬ್ರದರ್ಸ್ ಮೇಕೆದಾಟು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ ಕಾರ್ಯಕರ್ತರೊಂದಿಗೆ ಚರ್ಚಿಸಿ ಪಾದಯಾತ್ರೆ ರೂಪುರೇಷೆ ಕುರಿತು ಸಿದ್ಧತೆ ಮಾಡಿಕೊಂಡಿದ್ದಾರೆ.
ಮೇಕೆದಾಟು ಸ್ಥಳ ಪರಿಶೀಲನೆ:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಜನವರಿ 9 ರಿಂದ ಪಾದಯಾತ್ರೆ ನಡೆಸಲಿದ್ದಾರೆ. ಈ ಪಾದಯಾತ್ರೆಯನ್ನು ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಕನಕಪುರದ ಮೇಕೆದಾಟಿಗೆ ಆಗಮಿಸಿ ಪರಿಶೀಲನೆ ನಡೆಸಿದರು.
ಪಾದಯಾತ್ರೆ ಪ್ರಾರಂಭದ ಸ್ಥಳ, ಪಾದಯಾತ್ರೆ ಸಾಗುವ ಮಾರ್ಗ, ಪಾದಯಾತ್ರೆ ವೇಳೆ ವಿಶ್ರಾಂತಿ ಪಡೆಯವ ಸ್ಥಳಗಳನ್ನು ನಿಗದಿ ಮಾಡುವ ನಿಟ್ಟಿನಲ್ಲಿ ಕಾರ್ಯಕರ್ತರೊಂದಿಗೆ ಚರ್ಚಿಸಿ ಸ್ಥಳ ನಿರ್ಧರಿಸಿದರು. ಅಲ್ಲದೇ ಸುತ್ತ ಮುತ್ತಲಿನ ಬಸ್ ನಿಲ್ದಾಣಗಳಿಗೆ ನಮ್ಮ ನೆಲ, ನಮ್ಮ ಜಲ ಮೇಕೆದಾಟು ಎಂಬ ನಾಮ ಫಲಕ ಹಾಕಿಸುವ ಮೂಲಕ ರಾಜ್ಯದ ಜನರ ಗಮನ ಸೆಳೆಯಲು ಮುಂದಾಗಿದ್ದಾರೆ.
ಪಾದಯಾತ್ರೆಗೆ ರಾಜ್ಯದ ಜನರ ಆಶೀರ್ವಾದ ಕೇಳಿದ ಡಿಕೆಶಿ:
ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಮೇಕೆದಾಟು ಪಾದಯಾತ್ರೆ ಕಾಂಗ್ರೆಸ್ ಪಾಲಿಗೆ ರಾಜಕೀಯ ಅಸ್ತ್ರವಾಗಿ ಸಿಕ್ಕಿದ್ದು, ಹೇಗಾದರೂ ಮಾಡಿ ಈ ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಡಿಕೆಶಿ ಪಣತೊಟ್ಟಿದ್ದಾರೆ. ಈ ಭಾಗದಿಂದ ಅತಿ ಹೆಚ್ಚು ನೀರು ಸಮುದ್ರದ ಪಾಲಾಗುತ್ತಿದೆ. ಈಗಾಗಿ ನಾವು ಈ ನೀರನ್ನು ಇಲ್ಲಿಯೇ ತಡೆದು ಬೆಂಗಳೂರಿನ ಜನತೆಗೆ ಕುಡಿಯಲು ಕೊಡೋಣ. ಈ ಭಾಗದ ಒಂದು ಎಕರೆ ಇರುವ ರೈತರಿಗೂ ಕೂಡ ಈ ನೀರು ಉಪಯೋಗವಿಲ್ಲ. ಕಾವೇರಿ ಜಲನಯನ ಪ್ರದೇಶ ಅಣೆಕಟ್ಟು ಕಟ್ಟಲು ಹೋರಾಟ ಮಾಡುತ್ತಿದ್ದೇವೆ. ಹಾಗಾಗಿ ನಿಮ್ಮ ಆಶೀರ್ವಾದ ಇರಲಿ. ನೀವು ನಮ್ಮೊಂದಿಗೆ ಹೆಜ್ಜೆ ಹಾಕಿ ಬನ್ನಿ ಎಂದು ಮನವಿ ಮಾಡಿದರು.
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಚಲನಚಿತ್ರ ಮಂಡಳಿ ಪದಾಧಿಕಾರಿಗಳಿಗೆ ಡಿಕೆಶಿ ಮನವಿ
ಜ. 9 ರಂದು ಮೇಕೆದಾಟು ಸಂಗಮದಿಂದ ಪಾದಯಾತ್ರೆ ಪ್ರಾರಂಭವಾಗಲಿದ್ದು, ಒಟ್ಟು 11 ದಿನಗಳ ಕಾಲ ನಡೆಯಲಿದೆ. ಕೊನೆಯ ದಿನದಂದು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾರೋಪ ಸಭೆ ನಡೆಯಲಿದೆ. ಮೊದಲನೇ ದಿನ ಹೆಗ್ಗನೂರು ದೊಡ್ಡ ಅಲಹಳ್ಳಿಯಿಂದ ಪ್ರಾರಂಭವಾದ ಪಾದಯಾತ್ರೆ ಮಾದಪ್ಪನ ದೊಡ್ಡಿ, ಕರಿಯಣ್ಣನ ದೊಡ್ಡಿ, ಕನಕಪುರ ಟೌನ್, ಗಾಣಾಳು, ಚಿಕ್ಕೇನಹಳ್ಳಿ, ಕೃಷ್ಣಾಪುರ ದೊಡ್ಡಿ, ರಾಮನಗರ ಟೌನ್, ಮಾಯಗಾನ ಹಳ್ಳಿ, ಬಿಡದಿ ಟೌನ್, ರಾಜಕುಮಾರ್ ಫಾರಂ, ಕೆಂಗೇರಿ, ನ್ಯಾಯಂಡಹಳ್ಳಿ ಜಂಕ್ಷನ್, ಸಾರಕ್ಕಿ ಸಿಗ್ನಲ್, ಮಾರತ್ಹಳ್ಳಿ ಜಂಕ್ಷನ್, ಕೆ.ಆರ್ ಪುರಂ ಜಂಕ್ಷನ್, ಲಿಂಗರಾಜಪುರ ಜಂಕ್ಷನ್, ಮೇಕ್ರಿ ಸರ್ಕಲ್, ಕಾಂಗ್ರೆಸ್ ಭವನ ತಲುಪಿ ಕೊನೆಯ ದಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನಕ್ಕೆ ಸಾಗಿ ಅಲ್ಲಿ ಸಮಾರೋಪ ಸಭೆ ನಡೆಯಲಿದೆ.