ರಾಮನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ರಾಮನಗರ ಜಿಲ್ಲಾ ಕೇಂದ್ರ ಮತ್ತು ಮಾಗಡಿ ತಾಲೂಕಿಗೆ ಭೇಟಿ ನೀಡುತ್ತಿದ್ದು, ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
ಇಂದು ಬೆಳಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರಧಾನ ಕಾರ್ಯಕ್ರಮ ನಡೆಯಲಿದ್ದು, ಇದಕ್ಕಾಗಿ ಜಿಲ್ಲಾಡಳಿತವು ಸಿದ್ಧತೆಗಳನ್ನು ಮಾಡಿಕೊಂಡಿದೆ. ಮೊದಲಿಗೆ ಡಿಸಿ ಕಚೇರಿ ಆವರಣದಲ್ಲಿ ನಾಡಪ್ರಭು ಕೆಂಪೇಗೌಡ ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪ್ರತಿಮೆಗಳನ್ನು ಮುಖ್ಯಮಂತ್ರಿ ಅನಾವರಣಗೊಳಿಸಲಿದ್ದಾರೆ.
ಬಳಿಕ ನಗರಾಭಿವೃದ್ಧಿ ಇಲಾಖೆಯ ಹಲವು ಗ್ರಾಮಗಳಿಗೆ ನದಿ ಮೂಲದ ನೀರು ಪೂರೈಸುವ ನಳ ಸಂಪರ್ಕ ವ್ಯವಸ್ಥೆ, ಪ್ರಾಧಿಕಾರದ ಕಟ್ಟಡದ ಛಾವಣಿಯಲ್ಲಿ ಸೌರಶಕ್ತಿ ಫಲಕ, ಕಂದಾಯ ಭವನದ ಕೋವಿಡ್ ರೆಫರಲ್ ಆಸ್ಪತ್ರೆ, ಕನಕಪುರ ಸಾರ್ವಜನಿಕ ಆಸ್ಪತ್ರೆಯ ಆಮ್ಲಜನಕ ಘಟಕ, ಜಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಿರುವ 5 ಅಂಗನವಾಡಿ ಮತ್ತು 6 ಪಶು ಆಸ್ಪತ್ರೆಗಳು, ಚನ್ನಪಟ್ಟಣ ತಾ.ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿರ್ಮಿಸಿರುವ ಹೆಚ್ಚುವರಿ ಕೊಠಡಿಗಳು, ಮಾಕಳಿ ಮತ್ತು ಚಕ್ಕೆರೆಗಳಲ್ಲಿ ನಿರ್ಮಿಸಿರುವ ಸರ್ಕಾರಿ ಪದವಿಪೂರ್ವ ಕಾಲೇಜುಗಳನ್ನು ಉಭಯ ಮುಖಂಡರು ಉದ್ಘಾಟಿಸಲಿದ್ದಾರೆ.
ಓದಿ: ಬಾಯ್ ಹೇಳುವ ಮುನ್ನ ಪ್ರೀತಿಯ ಅಪ್ಪುಗೆ: ಮತ್ತೆ ಅಭಿಮಾನಿಗಳ ಮನಗೆದ್ದ ವಿಕ್ಕಿ- ಕತ್ರಿನಾ
ಹಾಗೆಯೇ ಇದೇ ಸಂದರ್ಭದಲ್ಲಿ ಬಿಡದಿ ಪಟ್ಟಣದ ಒಳಚರಂಡಿ ಕಾಮಗಾರಿ, 1,100ಕ್ಕೂ ಹೆಚ್ಚು ಮನೆಗಳಿಗೆ ಶುದ್ಧ ಕುಡಿವ ನೀರು ಪೂರೈಸುವ ನಲ್ಲಿ ಸಂಪರ್ಕ, ರಾಮನಗರದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಸಂಸ್ಥೆಯ 2 ಮತ್ತು 3 ನೇ ಮಹಡಿ, ಅರ್ಚಕರಹಳ್ಳಿಯಲ್ಲಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಹಾಸ್ಟೆಲ್ ನಿರ್ಮಾಣ ಮತ್ತು ರಾಮನಗರದಲ್ಲಿ ತಲೆ ಎತ್ತಲಿರುವ ಸರ್ಕಾರಿ ಯುನಾನಿ ಕಾಲೇಜು ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ಕೂಡ ಮಾಡಲಿದ್ದಾರೆ.
ಮಾಗಡಿ ತಾಲೂಕಿನಲ್ಲಿ ಅಭಿವೃದ್ಧಿ ಪರ್ವ :
ರಾಮನಗರದ ಕಾರ್ಯಕ್ರಮದ ಬಳಿಕ ಮುಖ್ಯಮಂತ್ರಿ ಮತ್ತು ಸಚಿವರು ಮಾಗಡಿ ತಾಲೂಕಿನಲ್ಲಿರುವ ಚಿಕ್ಕಕಲ್ಯ ಗ್ರಾಮಕ್ಕೆ ತೆರಳಲಿದ್ದು, ಅಲ್ಲಿ ಅತ್ಯಾಧುನಿಕ ಸರ್ಕಾರಿ ಉಪಕರಣಕಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ನಿರ್ಮಾಣಕ್ಕೆ ಅಡಿಗಲ್ಲು ಹಾಕಲಿದ್ದಾರೆ.
ಇದರ ಜತೆಗೆ ತಾಲೂಕಿನ ತಿಪ್ಪಸಂದ್ರ ಹೋಬಳಿಯಲ್ಲಿ 100 ಎಕರೆ ವಿಸ್ತಾರದಲ್ಲಿ ತಲೆಯೆತ್ತಲಿರುವ ಕರ್ನಾಟಕ ರಾಜ್ಯ ಸಂಸ್ಕೃತ ವಿವಿ ಕ್ಯಾಂಪಸ್, ಕರ್ನಾಟಕ ಮುಕ್ತ ವಿವಿ ಪ್ರಾದೇಶಿಕ ಕೇಂದ್ರ ನಿರ್ಮಾಣ, ಅಜ್ಜನಹಳ್ಳಿಯಲ್ಲಿ ಮೆಟ್ರಿಕ್-ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ನಿರ್ಮಾಣ, ಮಾಗಡಿ ಪಟ್ಟಣದಲ್ಲಿ ಮೆಟ್ರಿಕ್ ನಂತರದ ಬಾಲಕದ ಹಾಸ್ಟೆಲ್ ಮತ್ತು ನೂತನ ಗ್ರಂಥಾಲಯ ಕಟ್ಟಡ, ಕುದೂರಿನಲ್ಲಿ ತಲೆಯೆತ್ತಲಿರುವ ಮೆಟ್ರಿಕ್-ಪೂರ್ವ ಬಾಲಕಿಯರ ಹಾಸ್ಟೆಲ್, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಿಬ್ಬಂದಿ ವಸತಿ ಗೃಹ ಕಾಮಗಾರಿ, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಕಟ್ಟಡ, ಉಕ್ಕಡ ಮತ್ತು ಕರಿಯನ ಪಾಳ್ಯ ಗ್ರಾಮಗಳಿಗೆ ಶುದ್ಧ ನೀರು ಪೂರೈಕೆ ಮಾಡುವ ನಲ್ಲಿ ಸಂಪರ್ಕ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಓದಿ: ಇದೇನಪ್ಪಾ ವಿಶೇಷ ಅಂತೀರಾ..? ಪ್ರೀತಿಯ ಬೆಕ್ಕುಗಳಿಗೂ ಅದ್ಧೂರಿ ಸೀಮಂತ!
ಅಲ್ಲದೇ, ಈಗಾಗಲೇ ನಿರ್ಮಾಣವಾಗಿರುವ ಬೆಸ್ಕಾಂ ವಿಭಾಗೀಯ ಕಚೇರಿ, 10 ಕಿ.ಮೀ. ರಸ್ತೆ ಮತ್ತು 5 ಅಂಗನವಾಡಿ ಕಟ್ಟಡಗಳನ್ನು ಉದ್ಘಾಟಿಸಲಿದ್ದಾರೆ. ಇದರ ಜೊತೆ ಕೆಂಪಾಪುರಕ್ಕೆ ಭೇಟಿ ನೀಡಿ ಕೆಂಪೇಗೌಡರ ಸಮಾಧಿಗೆ ಪುಷ್ಪ ನಮನ ಕೂಡ ಇದೇ ವೇಳೆ ಸಿಎಂ ಸಲ್ಲಿಸಲಿದ್ದಾರೆ.