ರಾಮನಗರ: ಸ್ಕೂಲ್ ಬಸ್ ಹರಿದ ಪರಿಣಾಮ ಬಾಲಕಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಮನಗರದ ದೊಡ್ಡಮಣ್ಣುಗುಡ್ಡೆ ರಸ್ತೆಯಲ್ಲಿ ನಡೆದಿದೆ.
ಖಾಸಗಿ ಶಾಲಾ ವಾಹನ ಮಕ್ಕಳನ್ನು ಬಿಡಲು ಹೋಗಿದ್ದ ವೇಳೆ ಈ ಘಟನೆ ನಡೆದಿದ್ದು, ಜೀವಿತಾ ಎಂಬ 12 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಶಾಲಾ ವಾಹನ ದೊಡ್ಡಮಣ್ಣುಗುಡ್ಡೆ ರಸ್ತೆ ಬಳಿ ತಿರುವು ಪಡೆಯಲು ಹಿಮ್ಮುಖವಾಗಿ ಚಲಿಸುತ್ತಿದ್ದಾಗ ಬಾಲಕಿ ಮೇಲೆ ಹರಿದಿದೆ. ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿ ಸಾವನ್ನಪ್ಪಿರುವ ವಿಷಯ ಪೋಷಕರಿಗೆ ಗೊತ್ತಾಗುತ್ತಿದ್ದಂತೆ ಅವರ ಆಕ್ರಂದನ ಮುಗಿಲು ಮುಟ್ಟಿದೆ.
ವಾಹನ ಚಾಲಕನ ಅಜಾಗರೂಕತೆಯಿಂದಾಗಿ ಬಾಲಕಿ ಸಾವನ್ನಪ್ಪಿದ್ದು, ಘಟನೆ ನಡೆಯುತ್ತಿದ್ದಂತೆ ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.