ರಾಮನಗರ: ಜಿಲ್ಲೆಯ ಕೈಲಾಂಚ ಹೋಬಳಿಯ ಗೌಡಯ್ಯನದೊಡ್ಡಿ ಗ್ರಾಮದ ಸಮೀಪದ ಕೆರೆ ಏರಿ ರಸ್ತೆಯಲ್ಲಿ ಇಂದು ನಡೆದ ಬಸ್ ಮತ್ತು ಬೈಕ್ ಅಪಘಾತದಲ್ಲಿ ನಾಲ್ಕು ವರ್ಷದ ಮಗು ಸಾವನ್ನಪ್ಪಿದೆ. ತಂದೆ- ತಾಯಿ ಮತ್ತು ಮತ್ತೊಂದು ಮಗು ಗಾಯಗೊಂಡಿದೆ.
ಮಾಗಡಿ ತಾಲೂಕು ತೊರೆಪಾಳ್ಳ ಗ್ರಾಮದ ರೇಣುಕಯ್ಯ, ಶಿಲ್ಪ ದಂಪತಿ ತಮ್ಮ ಮಕ್ಕಳಾದ 4 ವರ್ಷದ ಚಂದನ, ಒಂದು ವರ್ಷದ ಕೃತಿಕಾರೊಂದಿಗೆ ಬೈಕ್‌ನಲ್ಲಿ ರಾಮನಗರ ತಾಲೂಕಿನ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟಕ್ಕೆ ದೇವರ ದರ್ಶನಕ್ಕಾಗಿ ತೆರಳುತ್ತಿದ್ದರು. ರಾಮನಗರ-ಕನಕಪುರ ರಸ್ತೆಯ ಗೌಡಯ್ಯನದೊಡ್ಡಿ ಗ್ರಾಮದ ಕೆರೆ ಏರಿ ರಸ್ತೆಯಲ್ಲಿ ಕನಕಪುರ ಕಡೆಯಿಂದ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ರಸ್ತೆ ಗುಂಡಿ ತಪ್ಪಿಸುವ ಸಲುವಾಗಿ ಬಲಭಾಗಕ್ಕೆ ಚಲಿಸಿದೆ. ಈ ವೇಳೆ ಬೈಕ್ ಮುಂದೆ ಚಲಿಸುತ್ತಿದ್ದ ಆಟೋ ಚಾಲಕ ತಕ್ಷಣ ಬ್ರೇಕ್ ಹಾಕಿದ್ದಾನೆ. ಇದರಿಂದ ಆಯತಪ್ಪಿದ ಬೈಕ್ ರಸ್ತೆಗೆ ಬಿದ್ದಿದ್ದು, ಬೈಕ್‌ನ ಮುಂಭಾಗ ಕುಳಿತಿದ್ದ ನಾಲ್ಕು ವರ್ಷದ ಚಂದನ ಮೇಲೆ ಬಸ್‌ನ ಚಕ್ರ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ರೇಣುಕಯ್ಯ, ಶಿಲ್ಪ ಮತ್ತು ಒಂದು ವರ್ಷದ ಕೃತಿಕಾ ಎಂಬ ಮಗು ಎಡಭಾಗಕ್ಕೆ ಬಿದ್ದ ಪರಿಣಾಮ ಅವರಿಗೆ ಗಾಯಗಳಾಗಿದೆ. ಮೂವರಿಗೂ ರಾಮನಗರದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತ ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಹರ್ ಘರ್ ತಿರಂಗಾ ಅದ್ಭುತ ಪರಿಕಲ್ಪನೆ, ಅದನ್ನು ಸಾಕಾರಗೊಳಿಸುವಲ್ಲಿ ಸರ್ಕಾರ ತಪ್ಪು ಮಾಡಿದೆ: ರಂಗಕರ್ಮಿ ಪ್ರಸನ್ನ