ರಾಮನಗರ: ಮಳೆ ಬಂದಾಗ ಸೋರುವ ಕಟ್ಟಡ. ಬಿರುಕು ಬಿಟ್ಟಿರುವ ಗೋಡೆಗಳು. ಕಿರಿದಾದ ಜಾಗದಲ್ಲಿ ಕಾರ್ಯ ನಿರ್ವಹಿಸುವ ಒತ್ತಡ. ಅನುದಾನದ ಕೊರತೆಯಿಂದಾಗಿ ದಶಕದಿಂದ ಪಾಳು ಬಿದ್ದಿರುವ ನೂತನ ಕಟ್ಟಡ. ಇದು ಚನ್ನಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಗೋಳಿನ ಕಥೆ.
ಪಾಳು ಬಿದ್ದ ಕಟ್ಟಡದಲ್ಲಿ ಕೆಲಸ ಮಾಡುವ ಒತ್ತಡ :
ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿರವರ ಸ್ವ ಕ್ಷೇತ್ರ ಚನ್ನಪಟ್ಟಣ ಕ್ಷೇತ್ರದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಟ್ಟಡಕ್ಕೆ ದಶಕಗಳು ಕಳೆದ್ರೂ ಅನುದಾನದ ಕೊರತೆಯಿಂದ ಉದ್ಘಾಟನೆ ಭಾಗ್ಯ ಮಾತ್ರ ದೊರಕಿಲ್ಲ. 2007 ರಲ್ಲಿ 40 ಲಕ್ಷ ರೂ. ಅನುದಾನದಲ್ಲಿ ಕಟ್ಟಡ ನಿರ್ಮಾಣ ಮಾಡಲಾಯಿತು. ಆದ್ರೆ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಹೆಚ್ಚುವರಿಯಾಗಿ 15 ಲಕ್ಷ ಕೊರತೆಯಾಯ್ತು. ನಂತರ ಕಟ್ಟಡ ನಿರ್ಮಾಣ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ಅನೇಕ ಬಾರಿ ಪತ್ರ ಬರೆದರೂ ಯಾವುದೇ ಪ್ರಯೋಜನ ಆಗದೇ ಕಳೆದ 14 ವರ್ಷಗಳಿಂದ ಈ ಕಟ್ಟಡ ಪೂರ್ಣಗೊಳ್ಳದೇ ನೆನೆಗುದಿಗೆ ಬಿದ್ದಿದೆ.
ಬಿರುಕು ಬಿಟ್ಟಿರುವ ಕಟ್ಟಡದಲ್ಲಿ ಕೆಲಸ:
ಪ್ರಸ್ತುತ ನೂತನ ಕಟ್ಟಡದ ಮುಂಭಾಗದಲ್ಲಿರುವ ಹಳೆಯ ಕಟ್ಟಡದಲ್ಲಿ ಕ್ಷೇತ್ರ ಶಿಕ್ಷಣಾಧಿಕಾಗಳ ಕಚೇರಿ ಇದೆ. ಇಲ್ಲಿಯ ಬಿಇಒಗೆ ಕುಳಿತುಕೊಳ್ಳಲು ಸುಸಜ್ಜಿತ ಸೂರಿಲ್ಲ. ಈ ಕಚೇರಿ ಹಂಚಿನ ಮನೆಯ ಬಹಳ ಹಳೆಯ ಕಟ್ಟಡವಾಗಿದೆ. ಮಳೆ ಬಂದರೆ ಕಟ್ಟಡ ಸೋರುತ್ತದೆ. ಗೋಡೆಗಳೆಲ್ಲ ಬಿರುಕು ಬಿಟ್ಟಿವೆ. ಯಾವಾಗ ಕಟ್ಟಡ ಬಿದ್ದು ಹೋಗುತ್ತದೆ ಎಂಬ ಆತಂಕದಲ್ಲಿ ಇಲ್ಲಿಯ ಸರ್ಕಾರಿ ನೌಕಕರರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಗಮನ ಹರಿಸುತ್ತಾರೆಯೇ ರಾಜಕೀಯ ಮುಖಂಡರು :
ಸರ್ಕಾರಿ ವ್ಯವಸ್ಥೆಯನ್ನ ಅಣಕಿಸುವಂತೆ ಈ ಕಟ್ಟಡ ಇದೆ. ಮಾಜಿ ಸಿಎಂ ಹೆಚ್ಡಿಕೆ ಈ ಕ್ಷೇತ್ರದ ಶಾಸಕರಾಗಿದ್ದಾರೆ. ಇದಲ್ಲದೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ತವರು ಜಿಲ್ಲೆ. ಸಂಸದ ಡಿ.ಕೆ.ಸುರೇಶ್ ಪ್ರತಿನಿಧಿಸುವ ಕ್ಷೇತ್ರ. ಜೊತೆಗೆ ಪ್ರಸ್ತುತ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿರುವ ಸಿ.ಪಿ. ಯೋಗೇಶ್ವರ್ ಸೇರಿದಂತೆ ಘಟಾನುಘಟಿಗಳು ಈ ಕ್ಷೇತ್ರದಲ್ಲಿ ಇದ್ದಾರೆ. ಆದರೂ ಕಟ್ಟಡ ನಿರ್ಮಾಣ ವಿಚಾರದಲ್ಲಿ ಮಾತ್ರ ಯಾರು ತಲೆಕೆಡಿಸಿಕೊಳ್ಳದಿರುವುದು ಮಾತ್ರ ಸೋಜಿಗ ಮೂಡಿಸಿದೆ.
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೋಟ್ಯಂತರ ರೂ. ಖರ್ಚು ಮಾಡುವ ಸರ್ಕಾರ ಶಾಲೆಗಳ ಮೇಲುಸ್ತುವಾರಿ ವಹಿಸುವ ಕಟ್ಟಡಕ್ಕೆ ಅನುದಾನ ಬಿಡುಗಡೆ ಮಾಡದಿರುವುದು ಮಾತ್ರ ವಿಪರ್ಯಾಸವೇ ಸರಿ.