ರಾಮನಗರ: ನಗರದ ಶಕ್ತಿ ದೇವತೆ ಚಾಮುಂಡೇಶ್ವರಿ ಸೇರಿದಂತೆ ನವ ಮಾತೆಯರ ಕರಗ ಮಹೋತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು.
ಮೈಸೂರು ದಸರಾ ಮಾದರಿಯಲ್ಲಿಯೇ ನಡೆಯುವ ಶಕ್ತಿ ದೇವತೆ ಜಾತ್ರಾಮಹೋತ್ಸವದಲ್ಲಿ ರಾಜ್ಯ, ಹೊರರಾಜ್ಯಗಳಿಂದ ಬಂದ ಲಕ್ಷಾಂತರ ಭಕ್ತರು ರಾತ್ರಿಯಿಡೀ ಕಾದು ಕರಗ ಅಗ್ನಿಕೊಂಡ ಪ್ರವೇಶವನ್ನು ಕಣ್ತುಂಬಿಕೊಂಡು ಪುನೀತರಾದರು.
ರಾಮನಗರಕ್ಕೆ ಒಂದೇ ಬಾರಿಗೆ ಒಂಬತ್ತು ಕರಗಗಳ ಧಾರಣೆ ಮಾಡುವ ಏಕೈಕ ಕ್ಷೇತ್ರ ಎನ್ನುವ ಕಿರೀಟ ಕೂಡ ಇದೆ. ಅನಾದಿಕಾಲದಿಂದಲೂ ಏಳು ಕರಗಗಳು ನಡೆಯುವುದು ವಿಶೇಷವಾಗಿತ್ತು. ಆದರೆ, ಕಳೆದ ಎರಡು ವರ್ಷಗಳಿಂದ ಎರಡು ಕರಗ ಹೆಚ್ಚುವರಿಯಾಗಿ ಸೇರ್ಪಡೆಗೊಂಡು ನವ ಮಾತೃಕೆಯರ ಕರಗ ನಡೆಯಲಿದೆ. ಚಾಮುಂಡೇಶ್ವರಿ ಕರಗದಂದೇ ಆದಿಶಕ್ತಿಪುರದ ಮಾರಮ್ಮ, ಬಿಸಿಲು ಮಾರಮ್ಮ, ಮಗ್ಗದಕೇರಿ ಮಾರಮ್ಮ, ಬಾಲಗೇರಿ ಮಾರಮ್ಮ, ಭಂಡಾರಮ್ಮ, ಮುತ್ತುಮಾರಮ್ಮ, ಶೆಟ್ಟಹಳ್ಳಿ ಆದಿಶಕ್ತಿ, ಕೊಂಕಾಣಿದೊಡ್ಡಿ ಆದಿಶಕ್ತಿ, ಚೌಡೇಶ್ವರಿ, ಏಳುಮಂದಮ್ಮ ಸೇರಿ ನವ ಮಾತೃಕೆಯರ ಕರಗ ಮಹೋತ್ಸವ ನಡೆಯುತ್ತದೆ.
ರಾತ್ರಿಯಿಡೀ ಅಗ್ನಿಕೊಂಡ ಹಿಡಿದು ನಗರದ ವಿವಿಧ ರಸ್ತೆ, ಗಲ್ಲಿ ಗಲ್ಲಿಗಳಲ್ಲಿ ಸಂಚರಿಸಿ ಪೂಜೆ ಸ್ವೀಕರಿಸುವ ಕರಗಗಳನ್ನು ವೀಕ್ಷಣೆ ಮಾಡುವುದೇ ಒಂದು ವಿಶೇಷ. ಚಾಮುಂಡೇಶ್ವರಿ ದೇವಿಯ ಕರಗಾಧಾರಿ ವಿ.ದೇವಿಪ್ರಸಾದ್ 19ನೇ ಬಾರಿಗೆ ಯಶಸ್ವಿಯಾಗಿ ಅಗ್ನಿಕೊಂಡ ಪ್ರವೇಶಿಸಿದರು. ಚಾಮುಂಡೇಶ್ವರಿ ಅಗ್ನಿಕೊಂಡ ಮಹೋತ್ಸವದ ಪ್ರಯುಕ್ತ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆಯಲ್ಲಿ ಹೆಸರಾಂತ ಕಲಾವಿದರ ರಸಸಂಜೆ ನಡೆಯಿತು. ಈ ಬಾರಿ ವಿಶೇಷ ಆಕರ್ಷಣೆಯಾಗಿ ಗಾಯಕ ವಿಜಯ್ ಪ್ರಕಾಶ್ ಮತ್ತು ಮುಂಬೈ ಸೇರಿ ವಿವಿಧೆಡೆಯಿಂದ ಬಂದ ಖ್ಯಾತ ಕಲಾವಿದರ ತಂಡಗಳು ಮನರಂಜನಾ ಕಾರ್ಯಕ್ರಮಗಳನ್ನು ನೀಡಿದವು.
ನಗರದ ವಿವಿಧ ಬಡಾವಣೆಗಳಲ್ಲಿ ಹೂವಿನ ವಿಶೇಷ ಸಿಂಗಾರ ಎಲ್ಲರ ಭಕ್ತಿಯ ಸಮರ್ಪಣೆಗೆ ಸಾಕ್ಷಿಯಾಗಿತ್ತು. ಮಂಗಳವಾರ ಪೂರ್ತಿ ನಗರ ಪ್ರದಕ್ಷಿಣೆ ಮಾಡಿದ ಕರಗಧಾರಿಗಳು ಬುಧವಾರ ಆಯಾ ದೇವಾಲಯಗಳ ಬಳಿ ಸಿದ್ದಗೊಂಡಿದ್ದ ಅಗ್ನಿಕೊಂಡ ಪ್ರವೇಶ ಮಾಡಿ ದೇವಾಲಯ ಸೇರಿದವು. ಈ ಬಾರಿಯೂ ಕೂಡ ಯಾವುದೇ ಅಹಿತಕರ ಘಟನೆ ವರದಿಯಾಗದೆ ಕರಗ ಮಹೋತ್ಸವ ಯಶಸ್ವಿಯಾಗಿ ಜರುಗಿದ್ದು, ಇನ್ನೂ ಮೂರ್ನಾಲ್ಕು ದಿನಗಳ ಕಾಲ ಹಬ್ಬದ ಸಂಭ್ರಮ ಹಾಗೂ ಜಾತ್ರೆಯ ಸಡಗರ ನಗರದಾದ್ಯಂತ ಸದ್ದುಮಾಡಲಿದೆ.