ರಾಮನಗರ: ಜಿಲ್ಲೆಯ ವಿವಿಧೆಡೆ ಸರಗಳ್ಳತನ ಮಾಡುತ್ತಿದ್ದ ಖತರ್ನಾಕ್ ಖದೀಮರಿಬ್ಬರನ್ನು ಬ್ಯಾಡರಹಳ್ಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರು ಬ್ಯಾಡರಹಳ್ಳಿ, ಹಾರೋಹಳ್ಳಿ, ಕಗ್ಗಲೀಪುರ, ಬಿಡದಿ ಭಾಗಗಳಲ್ಲಿ ಮಹಿಳೆಯರು ಹಾಗೂ ವೃದ್ಧರನ್ನ ಟಾರ್ಗೆಟ್ ಮಾಡಿ ಸರ ಕಿತ್ತುಕೊಂಡು ಪರಾರಿ ಆಗುತ್ತಿದ್ದರು.
ಯತೀಶ್ ಹಾಗೂ ಅರ್ಜುನ ಬಂಧಿತ ಆರೋಪಿಗಳು. ಯತೀಶ್ ಮೂಲತಃ ಚಿಕ್ಕಮಗಳೂರಿನ ನಿವಾಸಿ, ಅರ್ಜುನ ಬೆಂಗಳೂರಿನವ. ಇವರು ಹಗಲಲ್ಲೇ ಪಲ್ಸರ್ ಬೈಕ್‌ನಲ್ಲಿ ಎಲ್ಲೆಡೆ ಸುತ್ತಾಡಿ, ಎಲ್ಲೆಲ್ಲಿ ಒಂಟಿ ಮಹಿಳೆಯರು ಓಡಾಡುತ್ತಿದ್ದಾರೆಂಬುದನ್ನು ತಿಳಿದುಕೊಳ್ಳುತ್ತಿದ್ದರು. ಬಳಿಕ ಮಹಿಳೆಯರು ಹಾಗೂ ವೃದ್ಧರ ಬಳಿ ಸರ ಕಿತ್ತುಕೊಂಡು ಪರಾರಿ ಆಗುತ್ತಿದ್ದರು. ಇದೀಗ ಬ್ಯಾಡರಹಳ್ಳಿ ಪೊಲೀಸರ ಅತಿಥಿಯಾಗಿದ್ದಾರೆ.
ಇಬ್ಬರೂ ಬೆಂಗಳೂರಿನಲ್ಲಿ ಪರಿಚಿತರಾಗಿ ರಾಜಧಾನಿಯ ಸುತ್ತಮುತ್ತ ಅನೇಕ ಸರಗಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಮೊದಲಿಗೆ ಬೈಕ್ ಕಳ್ಳತನ ಮಾಡಿಕೊಂಡು ಓಡಾಡುತ್ತಿದ್ದ ಇವರು, ಬಳಿಕ ಕಳ್ಳತನ ಮಾಡಿದ ಬೈಕ್‌ನಲ್ಲೇ ಸರಗಳ್ಳತನ ಮಾಡುವ ಪ್ಲಾನ್ ಮಾಡುತ್ತಿದ್ದರು. ಅದೇ ರೀತಿ ಮಹಿಳೆಯರು ಹಾಗೂ ವೃದ್ಧರನ್ನೇ ಟಾರ್ಗೆಟ್ ಮಾಡಿಕೊಂಡು ಬೈಕ್‌ನಲ್ಲಿ ಬಂದು ಸರಗಳ್ಳತನ ಮಾಡಿ ಎಸ್ಕೇಪ್ ಆಗ್ತಿದ್ರು. ಈ ಕುರಿತು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ ಎಂದು ಎಸ್ಪಿ ಡಾ. ಅನೂಪ್ ಎ. ಶೆಟ್ಟಿ ಮಾಹಿತಿ ನೀಡಿದರು.
ಬಂಧಿತ ಆರೋಪಿಗಳು 14 ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. 9 ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನದ ಸರ ಹಾಗೂ ನಾಲ್ಕು ಬೈಕ್‌ಗಳನ್ನ ವಶಕ್ಕೆ ಪಡೆಯಲಾಗಿದೆ. ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಗೆ ಎಸ್ಪಿ ಅನೂಪ್ ಎ. ಶೆಟ್ಟಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.