ರಾಮನಗರ: ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರು ಗುಜರಾತ್ ಶಾಸಕರನ್ನು ರೆಸಾರ್ಟ್ನಲ್ಲಿ ಇಟ್ಟಿದ್ದಾಗ ಅಮಿತ್ ಶಾ ಕರೆ ಮಾಡಿ ಶಾಸಕರನ್ನು ಕಳುಹಿಸಿಕೊಡುವಂತೆ ಹೇಳಿದ್ದರು. ಅಮಿತ್ ಶಾ ಮಾತಿಗೆ ಕಿಮ್ಮತ್ತು ನೀಡದ ಕಾರಣ ಅದಕ್ಕೆ ಪ್ರತೀಕಾರವಾಗಿ ಡಿಕೆಶಿ ಮೇಲೆ ಜಾರಿ ನಿರ್ದೇಶನಾಲಯದ (ಇಡಿ)ಅಧಿಕಾರಿಗಳು ದಾಳಿ ನಡೆಸಿದ್ದರು ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸಿ ಎಂ ಲಿಂಗಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಅಂದು ಮೂವರು ಶಾಸಕರನ್ನು ಬಿಟ್ಟುಕಳುಹಿಸುವಂತೆ ಕೇಳಿದ್ದರು. ಶಾ ಬೇಡಿಕೆ ಈಡೇರಿಸದೇ ಇದ್ದದ್ದಕ್ಕೆ ರೆಸಾರ್ಟ್ನಲ್ಲಿದ್ದಾಗಲೇ ಡಿಕೆಶಿ ಅವರ ಮೇಲೆ ದಾಳಿ ನಡೆಸಿದ್ದರು. ಇದು ಬಿಜೆಪಿಯವರ ದ್ವೇಷ ರಾಜಕಾರಣವನ್ನು ಸೂಚಿಸುತ್ತದೆ. ಡಿಕೆಶಿ ಅವರ ಸಹೋದರ, ಪತ್ನಿ ಹಾಗೂ ತಾಯಿ ಅವರಿಗೆ ಕಿರುಕುಳ ನೀಡಲಾಗಿದೆ. ಗುಜರಾತ್ ಶಾಸಕರನ್ನ ಕಾಪಾಡಿದ್ದೆ, ಅವರಿಗಿಂದು ಮುಳುವಾಗಿದೆ ಎಂದು ಹೇಳಿದರು.
ಇಡಿ ಅಧಿಕಾರಿಗಳು ರಾತ್ರಿ ನೋಟಿಸ್ ಕೊಟ್ಟು ನಾಳೆ ಹಾಜರಾಗಲು ಹೇಳಿದ್ದಾರೆ ಅಂದರೆ, ಇದ್ಯಾವ ನ್ಯಾಯ. ಕಾಂಗ್ರೆಸ್ನವರು ಬಿಟ್ಟು ಮತ್ಯಾರು ಅಪರಾಧ ಮಾಡಿಲ್ವಾ. ನಾವು ಇದನ್ನ ಸಹಿಸುವುದಿಲ್ಲ. ಬಿಜೆಪಿ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಾನವೀಯತೆ ಇಲ್ಲ: ಐಟಿ ಮತ್ತು ಇಡಿ ಅಧಿಕಾರಿಗಳಿಗೆ ಮನುಷ್ಯತ್ವವೇ ಇಲ್ಲದಂತೆ ವರ್ತಿಸುತ್ತಾರೆ. ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಸಾವಿಗೆ ಐಟಿ ಮತ್ತು ಇಡಿ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿದರು. ಡಿ ಕೆ ಶಿವಕುಮಾರ್ ಅವರಿಗೆ ಸ್ವಪಕ್ಷದಲ್ಲೇ ವಿರೋಧಿಗಳಿದ್ದಾರೆ. ಡಿಕೆಶಿ ಅವರಿಗೆ ಮೈತ್ರಿ ಸರ್ಕಾರದಲ್ಲಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರನ್ನ ಮಾತನಾಡಿಸಲು ಮುಜುಗರ ಇತ್ತು. ಆದರೂ ಪಕ್ಷದ ಹೈಕಮಾಂಡ್ ತೀರ್ಮಾನದಂತೆ ಡಿಕೆಶಿ ನಡೆದುಕೊಂಡ್ರು ಎಂದರು.