ರಾಮನಗರ: ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಬೀಳಿಸಲು ಕೆಲವರು ನೋಟಿನ ಕಂತೆ ಹಿಡಿದು ನಿಂತಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಚನ್ನಪಟ್ಟಣ ತಾಲೂಕಿನ ಬೇವೂರಿನಲ್ಲಿ ಜನತಾ ದರ್ಶನ ನಡೆಸಿದ ಬಳಿಕ ಮಾತನಾಡಿದ ಅವರು, ಸೋಮವಾರ ತಡ ರಾತ್ರಿ ಜನತಾ ದರ್ಶನ ಮುಗಿಸಿದ ಬಳಿಕ ತೋಟದ ಮನೆಯಲ್ಲಿ ಮಲಗಿದ್ದ ವೇಳೆ ನಮ್ಮ ಪಕ್ಷದ ಶಾಸಕರೊಬ್ಬರು ಕರೆಮಾಡಿ, ''ಅಣ್ಣ... ನನಗೆ ಬಿಜೆಪಿಯ ಒಬ್ಬರು ಕರೆ ಮಾಡಿ, ನಾಳೆ ಸರ್ಕಾರ ಕೆಡವುತ್ತೇವೆ. 10 ಕೋಟಿ ರೂ. ನೀಡುತ್ತೇವೆ ಬಿಜೆಪಿ ಸೇರ್ಪಡೆ ಆಗುವಂತೆ ಆಹ್ವಾನ ನೀಡಿದ್ದಾರೆ'' ಎಂದು ನನ್ನ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಆಪಾದಿಸಿದ್ದಾರೆ.
ಸಮ್ಮಿಶ್ರ ಸರ್ಕಾರ ಬೀಳಿಸಲು ಒಂದು ವರ್ಗವೇ ತಯಾರಿ ನಡೆಸಿದೆ. ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಪತನ ಆಗುವುದಿಲ್ಲ. ಐದು ವರ್ಷ ಸುಭದ್ರವಾಗಿ ಸಾಗಲಿದೆ. ಈ ಬಗ್ಗೆ ಆತಂಕ ಬೇಡ. ಜನರ ಸೇವೆಗೆ ನಾನು ಸಿದ್ಧ ಎಂದು ಭರವಸೆ ನೀಡಿದ್ದಾರೆ.
ಹುಬ್ಬಳ್ಳಿ - ಧಾರವಾಡ ಮಾದರಿಯಲ್ಲಿ ರಾಮನಗರ- ಚನ್ನಪಟ್ಟಣ ಅಭಿವೃದ್ಧಿಪಡಿಸಲಾಗುವುದು. ಈಗಾಗಲೇ ನೀಲ ನಕ್ಷೆ ಸಿದ್ಧಗೊಂಡಿದೆ. ಹೈಟೆಕ್ ವಿಶ್ವವಿದ್ಯಾನಿಲಯ, ಎಂಜಿನಿಯರಿಂಗ್ ಕಾಲೇಜು, ರಾಜೀವ್ ಗಾಂಧಿ ವಿವಿ ಸಂಬಂಧಿತ ಕಾಮಗಾರಿಗಳು ಆರಂಭಗೊಳ್ಳಲಿವೆ. ಜಿಲ್ಲೆಯ ಎಲ್ಲ ಸಮಸ್ಯೆಗಳ ಬಗ್ಗೆ ನನಗೆ ತಿಳಿದಿದೆ. ಮೂರು ತಾಲೂಕುಗಳ ಎಲ್ಲ ಕೆರೆಗಳನ್ನು ತುಂಬಿಸಲು ನಾನು ಬದ್ಧನಾಗಿದ್ದು, ಪ್ರತಿ ಮನೆಗೂ ಶುದ್ಧ ಕುಡಿಯುವ ನೀರಿನ ಪೂರೈಕೆಯ ಅಭಯ ನೀಡಿದರು.
ರೈತರ ಸಾಲ ಮನ್ನಾ ಮಾಡಿರುವುದು ಬಿಜೆಪಿಗೆ ಸಹಿಸಿಕೊಳ್ಳಲು ಆಗದೆ ಸಲ್ಲದ ಆರೋಪಗಳನ್ನು ನನ್ನ ಮೇಲೆ ಹೊರಿಸುತ್ತಿದೆ. ಈ ಹಿಂದಿನ ಸರ್ಕಾರದಲ್ಲಿನ ಯೋಜನೆಗಳಿಗೆ ಅನುದಾನ ಕಡಿತಗೊಳಿಸಿಲ್ಲ. ಪ್ರತಿ ಕ್ಷೇತ್ರದ ಯೋಜನೆಗೆ ₹ 400ರಿಂದ 500 ಕೋಟಿ ಅನುದಾನ ನೀಡಿದ್ದೇವೆ. ಗ್ರಾಮೀಣ ಭಾಗಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಪ್ರೋತ್ಸಾಹ ಧನ ಹೆಚ್ಚಳ:
ಹಾಲು ಉತ್ಪಾದಕರನ್ನು ಉತ್ತೇಜಿಸಲು ಹಾಗೂ ಹೈನುಗಾರರನ್ನು ಆರ್ಥಿಕವಾಗಿ ಬಲಪಡಿಸಲು ಮುಂದಿನ ದಿನಗಳಲ್ಲಿ ಪ್ರಸ್ತುತ 5 ರೂ. ಪ್ರೋತ್ಸಾಹ ಧನವನ್ನು ₹ 6ಕ್ಕೆ ಏರಿಸಲಾಗುವುದು. ನಿರುದ್ಯೋಗಿಗಳಿಗೆ ಖಾಯಂ ಉದ್ಯೋಗ ಅವಕಾಶ, ಕೆಎಸ್ಐಸಿಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಸಭೆ ನಡೆಸುತ್ತೇನೆ ಎಂದು ತಿಳಿಸಿದರು.