ರಾಮನಗರ: ಜಿಲ್ಲೆಯಲ್ಲಿ ಕೊರೊನಾ ರುದ್ರನರ್ತನದ ನಡುವೆಯೂ ಬಿಡದಿಯ ಹೊಸದೊಡ್ಡಿ ಗ್ರಾಮದಲ್ಲಿ ಜೆಡಿಎಸ್ ಮುಖಂಡ ಶೇಷಪ್ಪ ಅವರು ಅದ್ಧೂರಿಯಾಗಿ ಜನ್ಮದಿನ ಆಚರಿಸಿಕೊಳ್ಳುವ ಮೂಲಕ ಸರ್ಕಾರದ ನಿಮಯಗಳನ್ನು ಗಾರಿಗೆ ತೂರಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.
ಸಭೆ ಸಮಾರಂಭಗಳಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದ್ದರೂ ಯಾವುದೇ ನಿಯಮ ಪಾಲನೆ ಇಲ್ಲದೇ ಹುಟ್ಟುಹಬ್ಬ ಆಚರಿಸಿಕೊಂಡರು. ಶೇಷಪ್ಪ ಅವರಿಗೆ ಶುಭಕೋರಲು ಅಭಿಮಾನಿಗಳ ದಂಡೇ ಹರಿದು ಬಂದಿತ್ತು. ಬೆಂಗಳೂರು, ಮೈಸೂರು ಭಾಗದಿಂದಲೂ ಜನರು ಬಂದಿದ್ದರು.
ಅಲ್ಲದೇ, ವಾರದ ಹಿಂದೆಯಷ್ಟೇ ಕ್ವಾರಂಟೈನ್ನಿಂದ ಹೊರ ಬಂದಿರುವ ಮಾಗಡಿ ಶಾಸಕ ಎ.ಮಂಜು ಕೂಡ ಪಾರ್ಟಿಯಲ್ಲಿ ಭಾಗವಹಿಸಿದ್ದು, ಚರ್ಚೆಗೆ ಗ್ರಾಸವಾಗಿದೆ. ಶಾಸಕರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಜನಪ್ರತಿನಿಧಿಗಳಿಗೆ ಕಾನೂನು ಲೆಕ್ಕವಿಲ್ಲ ಎಂಬುದನ್ನು ಪರೋಕ್ಷವಾಗಿ ತೋರಿಸಿದ್ದಾರೆ. ಅಲ್ಲದೇ, ಅಲ್ಲಿ ಯಾರೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ. ಕೆಲವರು ಮಾಸ್ಕ್ ಧರಿಸಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಜನರಿಗೆ ಮಾದರಿಯಾಗಬೇಕಿದ್ದ ಜನಪ್ರತಿನಿಧಿಗಳೇ ಹೀಗೆ ಮಾಡಿದರೆ ಹೇಗೆ? ಸಾಮಾನ್ಯ ಜನರ ಮೇಲಷ್ಟೇ ಎಲ್ಲ ಕಾನೂನುಗಳ ಪ್ರಯೋಗ, ಜನಪ್ರತಿನಿಧಿಗಳ ಮೇಲಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಕಾನೂನು ಉಲ್ಲಂಘನೆ ಮಾಡಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.