ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಸಂಚಾರಕ್ಕೆ ಇಂದಿನಿಂದ ಟೋಲ್ ಪಾವತಿಸಬೇಕು. ದುಬಾರಿ ಟೋಲ್ ದರ ವಿರೋಧಿಸಿ ಕಾಂಗ್ರೆಸ್ ಮತ್ತು ಕನ್ನಡ ಪರ ಸಂಘಟನೆಯ ಹೋರಾಟಗಾರರು ಇಂದು ಪ್ರತಿಭಟನೆ ನಡೆಸಿದರು. ಬಿಡದಿಯ ಶೇಷಗಿರಿಹಳ್ಳಿ ಬಳಿಯ ಟೋಲ್ ಪ್ಲಾಜಾ ಮುಂಭಾಗ ಸೇರಿದ ಅವರು ಕಪ್ಪು ಬಾವುಟ ಪ್ರದರ್ಶಿಸಿ ರಸ್ತೆ ತಡೆದರು. ಬಿಜೆಪಿ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.
"ಹೆದ್ದಾರಿ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಸರ್ವೀಸ್ ರಸ್ತೆ ಸಂಪೂರ್ಣವಾದ ನಂತರ ಟೋಲ್ ಸಂಗ್ರಹ ಮಾಡಬೇಕು. ಅದನ್ನು ಬಿಟ್ಟು ಅತಿ ಹೆಚ್ಚು ದರ ನಿಗದಿ ಮಾಡಿ ಟೋಲ್ ಸಂಗ್ರಹಿಸುತ್ತಿರುವುದು ಖಂಡನೀಯ" ಎಂದು ಆಕ್ರೋಶ ಹೊರಹಾಕಿದರು.
ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಮುಂಜಾಗ್ರತಾ ಕ್ರಮವಾಗಿ ಟೋಲ್ಗೇಟ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಟೋಲ್ ಶುಲ್ಕ ಹೀಗಿದೆ...: ಕಾರು/ಜೀಪು/ವ್ಯಾನ್ಗಳ ಏಕಮುಖ ಸಂಚಾರಕ್ಕೆ ರೂ. 135/- ಅದೇ ದಿನ ಮರು ಸಂಚಾರಕ್ಕೆ ರೂ. 205/- ಒಂದು ತಿಂಗಳಲ್ಲಿ 50 ಏಕಮುಖ ಸಂಚಾರಕ್ಕೆ ತಿಂಗಳ ಪಾಸ್ ಶುಲ್ಕ ರೂ. 4525/-, ಬಸ್ ಅಥವಾ ಟ್ರಕ್ ಏಕಮುಖ ಸಂಚಾರಕ್ಕೆ ರೂ. 460/- ಅದೇ ದಿನ ಮರು ಸಂಚಾರಕ್ಕೆ ರೂ. 690/- ಒಂದು ತಿಂಗಳಲ್ಲಿ 50 ಏಕಮುಖ ಸಂಚಾರಕ್ಕೆ ತಿಂಗಳ ಪಾಸ್ ಶುಲ್ಕ ರೂ. 15325/-, ಲಘು ವಾಣಿಜ್ಯ ವಾಹನಗಳು, ಮೂರು ಅಕ್ಸೆಲ್ ವಾಣಿಜ್ಯ ವಾಹನಗಳು ಮತ್ತು ಭಾರಿ ನಿರ್ಮಾಣ ಯಂತ್ರಗಳಿಗೆ ವಿವಿಧ ದರಗಳನ್ನು ನಿಗದಿಪಡಿಸಲಾಗಿದೆ.
ಟೋಲ್ ಪ್ಲಾಜಾದಲ್ಲಿ ಎಲ್ಲಾ ರೀತಿಯ ವಾಹನಗಳು ಪ್ರಯಾಣದ 24 ತಾಸಿನೊಳಗಾಗಿ ಮರಳಿ ಬಂದಲ್ಲಿ ಶೇ.25 ರಷ್ಟು, ಎಲ್ಲಾ ವಿಭಾಗದ ವಾಹನಗಳ ಪಾವತಿ ದಿನಾಂಕದಿಂದ ಒಂದು ತಿಂಗಳೊಳಗಾಗಿ 50 ಬಾರಿ ಪ್ರಯಾಣಿಸಿದಲ್ಲಿ ಶೇ.33 ರಷ್ಟು, ಟೋಲ್ ಪ್ಲಾಜಾದಿಂದ 20 ಕಿ.ಮೀ ವಿಸ್ತೀರ್ಣದೊಳಗೆ ವಾಸಿಸುವ ಎಲ್ಲಾ ವಾಣಿಜ್ಯೇತರ ವಾಹನಗಳಿಗೆ ರೂ. 315/- ತಿಂಗಳ ಪಾಸ್ ಲಭ್ಯ ಹಾಗೂ ಟೋಲ್ ಪ್ಲಾಜಾ ಜಿಲ್ಲೆಯಲ್ಲಿ ನೋಂದಾಯಿತಗೊಂಡ ವಾಣಿಜ್ಯ ವಾಹನಗಳಿಗೆ ಶೇ.50 ರಷ್ಟು ರಿಯಾಯಿತಿ ದೊರೆಯಲಿದೆ.
ಆಪ್ ಪಕ್ಷದಿಂದಲೂ ವಿರೋಧ: ಇದೇ ವಿಚಾರವಾಗಿ ನಿನ್ನೆ ದಿನ ಆಮ್ ಆದ್ಮಿ ಪಕ್ಷದ ರಾಜ್ಯ ಸಂವಹನ ಉಸ್ತುವಾರಿ ಪತ್ರಕಾಗೋಷ್ಠಿ ನಡೆಸಿ, ಬಿಜೆಪಿ ನಾಯಕರು ಬೆಂ-ಮೈ ಹೆದ್ದಾರಿಯನ್ನು ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುವುದಾದರೆ ಟೋಲ್ ರದ್ದು ಪಡಿಸಿ ಹಣವನ್ನು ಭರಿಸುವಂತೆ ಆಗ್ರಹಿಸಿದ್ದರು. ನೂತನ ಹೆದ್ದಾರಿಯಲ್ಲಿ ಸಂಚರಿಸಲು 140 ರೂಪಾಯಿ ಟೋಲ್ ಕಟ್ಟಬೇಕಾಗಿದೆ. ಈ ಹಿಂದೆ ಎರಡು ಪಥವಿದ್ದ ರಸ್ತೆಯನ್ನು ನಾಲ್ಕು ಪಥ ಮಾಡಿದಾಗ ಟೋಲ್ ಕಟ್ಟಬೇಕಾಗಿರಲಿಲ್ಲ. ಸರ್ಕಾರವೇ ಸಂಪೂರ್ಣ ವೆಚ್ಚ ಭರಿಸಿತ್ತು. ಈಗ 140 ರೂಪಾಯಿ ನೀಡಬೇಕಾಗಿದೆ. ದುಬಾರಿ ಪೆಟ್ರೋಲ್ ಬೆಲೆ ನೀಡುವುದರ ಜೊತೆಗೆ ಟೋಲ್ ಶುಲ್ಕವನ್ನೂ ಪಾವತಿಸಲು ವಾಹನಸವಾರರಿಗೆ ಹೊರೆಯಾಗುತ್ತದೆ ಈ ಹಿನ್ನೆಲೆಯಲ್ಲಿ ಟೋಲ್ ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದರು.
ಇದನ್ನೂ ಓದಿ: ದಶಪಥ ರಸ್ತೆಯ ಸಂಪೂರ್ಣ ಕ್ರೆಡಿಟ್ ಪ್ರಧಾನಿ ಮೋದಿಗೆ ಸಲ್ಲಬೇಕು: ಸಿಎಂ ಬಸವರಾಜ ಬೊಮ್ಮಾಯಿ