ರಾಮನಗರ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಡಿ.ಸಿ.ತಮ್ಮಣ್ಣ ಬಿಡದಿಯ ಕೇತಗಾನಹಳ್ಳಿ ವ್ಯಾಪ್ತಿಯಲ್ಲಿ 200 ಎಕರೆ ಸರ್ಕಾರಿ ಗೋಮಾಳ ಜಮೀನು ಕಬಳಿಕೆ ಮಾಡಿದ್ದಾರೆ. ಇದು ಸಂವಿಧಾನ ವಿರೋಧಿ ಕೆಲಸ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಉಪ ವಿಭಾಗಾಧಿಕಾರಿ ಲೋಕಾಯುಕ್ತ ತನಿಖೆ ವೇಳೆ ಕೋರ್ಟ್ಗೆ ಸ್ವವಿವರವಾಗಿ ದಾಖಲೆ ನೀಡಿದ್ದಾರೆ. ಇತ್ತಿಚಿಗೆ ಹೈಕೋರ್ಟ್ ಕೂಡ ಮೂರು ತಿಂಗಳ ಕಾಲಾವಕಾಶ ನೀಡಿ ಸಂಪೂರ್ಣವಾಗಿ ಲೋಕಾಯುಕ್ತ ತನಿಖೆಯಲ್ಲಿ ಹೇಳಿರುವಂತೆ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಲಾಗಿತ್ತು ಎಂದರು.
ಭೂ ಕಬಳಿಕೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ನೈಜ ಸ್ಥಿತಿ ತಿಳಿಯಲು ಹೋಗಿದ್ದ ವೇಳೆ ಕುಮಾರಸ್ವಾಮಿ ಹಿಂಬಾಲಕರು ನಮ್ಮ ಮೇಲೆ ಮೊಟ್ಟೆ ಎಸೆದು ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಾನು ಬಳ್ಳಾರಿ ಸೇರಿದಂತೆ ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡಿದ್ದೇನೆ. ಅನೇಕ ಅಕ್ರಮ ಪರಿಶೀಲನೆಗಾಗಿ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಎಲ್ಲಿಯೂ ಒಂದು ಬೆದರಿಕೆ ಕರೆ ಕೂಡ ಬಂದಿರಲಿಲ್ಲ. ಆದರೆ, ಬಿಡದಿ ಪ್ರಕರಣ ನೋಡಿದರೆ ಇದು ಪ್ರಜಾಪ್ರಭುತ್ವ ರಾಷ್ಟವೇ ಎಂಬ ಅನುಮಾನ ಹುಟ್ಟುಹಾಕುವಷ್ಟು ಕೆಟ್ಟದಾಗಿ ನಡೆಸಿಕೊಂಡರು ಎಂದು ಹೇಳಿದರು.
ಯಾರು ಎಷ್ಟೇ ಬೆದರಿಕೆ ಹಾಕಿದರೂ ಕೂಡಾ ನಮ್ಮ ಹೋರಾಟ ಮುಂದುವರಿಯುತ್ತದೆ. ಸಾರ್ವಜನಿಕ ಜೀವನದಲ್ಲಿ ಅಕ್ರಮ ಮಾಡುವವರ ವಿರುದ್ಧ ನಿರಂತರವಾಗಿ ಹೋರಾಟ ಮಾಡಿ ನಿಜವಾದ ಫಲಾನುಭವಿಗಳಿಗೆ ನ್ಯಾಯ ದೊರಕಿಸಿಕೊಡುತ್ತೇವೆ. ರಾಜ್ಯವನ್ನಾಳಿದ ಕುಮಾರಸ್ವಾಮಿ ಬಿಡದಿಯ ಕೇತಗಾನಹಳ್ಳಿಯಲ್ಲಿ 22 ಎಕರೆ ಭೂಮಿ ಖರೀದಿ ಮಾಡಿದ್ದಾರೆ. ಆದರೆ, ಗೋಮಾಳ ಜಮೀನನ್ನ ಖರೀದಿ ಮಾಡಲು, ಮಾರಾಟ ಮಾಡಲು ಸಾಧ್ಯವಿಲ್ಲ. ಜೊತೆಗೆ ಕುಮಾರಸ್ವಾಮಿ ಚಿಕ್ಕಮ್ಮ ಸಾವಿತ್ರಮ್ಮ ಎಂಬುವರು 22 ಎಕರೆ ಖರೀದಿ ಮಾಡಿದ್ದಾರೆ. ನಂತರ ಇವರಿಗೆ ದಾನವಾಗಿ ನೀಡಲಾಗುತ್ತದೆ. ಒಟ್ಟು 54 ಎಕರೆ ಭೂಮಿ ಕುಮಾರಸ್ವಾಮಿಯವರ ಹೆಸರಿನಲ್ಲಿದೆ. ಲೋಕಾಯುಕ್ತದ ತನಿಖೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ ಎಂದರು.
ಕುಮಾರಸ್ವಾಮಿಯವರ ಸಂಬಂಧಿ ಹಾಗೂ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಕುಟುಂಬದವರು 200 ಎಕರೆ ಭೂ ಕಬಳಿಕೆ ಮಾಡಿದ್ದಾರೆ. ಇದನ್ನ ಮಾಜಿ ಸಂಸದ ಜಿ.ಮಾದೇಗೌಡರು ನಮ್ಮ ಗಮನಕ್ಕೆ ತಂದಿದ್ದಾರೆ ಎಂದು ಎಸ್.ಆರ್.ಹಿರೇಮಠ್ ಹೇಳಿದರು. ಕೂಡಲೇ ಅಕ್ರಮ ಭೂ ಕಬಳಿಕೆ ತೆರವುಗೊಳಿಸಿ ಸರ್ಕಾರಕ್ಕೆ ವಾಪಾಸ್ ನೀಡಿ, ಜನತೆ ಬಳಿ ಕ್ಷಮೆ ಕೋರುವಂತೆ ಒತ್ತಾಯಿಸಿದರು.