ರಾಮನಗರ: ನೀರುಗಂಟಿಯೊಬ್ಬರ ಮೇಲೆ ವಿನಾ ಕಾರಣ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ತಾಲೂಕಿನ ಲಕ್ಷ್ಮೀಪುರ ಗ್ರಾಮ ಪಂಚಾಯಿತಿ ನೌಕರರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.
ಗ್ರಾಪಂ ವ್ಯಾಪ್ತಿಯ ಮೆಳೇಹಳ್ಳಿ ಗ್ರಾಮದ ನೀರುಗಂಟಿ ಹನುಮಯ್ಯ ಎಂಬುವರ ಮೇಲೆ ಅದೇ ಪಂಚಾಯ್ತಿಯ ಸದಸ್ಯೆಯೊಬ್ಬರ ಪತಿ ಬೈರೇಗೌಡ ವಿನಾ ಕಾರಣ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಪ್ರದೀಪ್ ಮಾತನಾಡಿ, ಗ್ರಾಮ ಪಂಚಾಯ್ತಿಯ ನೌಕರರು (ನೀರುಗಂಟಿ, ಸ್ವಚ್ಛತಾ ಕಾರ್ಮಿಕರು ಸೇರಿದಂತೆ) ಸಹ ಕೊರೊನಾ ಸೈನಿಕರೇ. ಕೋವಿಡ್-19 ಸೋಂಕಿಗೆ ಹೆದರದೇ ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೊರೊನಾ ಸೈನಿಕರ ಮೇಲೆ ಹಲ್ಲೆ ಮಾಡಿದ ಆರೋಪಿತನ ವಿರುದ್ಧ ತಕ್ಷಣ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದರು. ನಂತರ ನೌಕರರು ಪಂಚಾಯಿತಿ ಪಿಡಿಒ ಹಾಗೂ ರಾಮನಗರ ತಾಪಂ ಇಒ ಅವರಿಗೆ ಮನವಿ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಹಲ್ಲೆಗೊಳಗಾದ ನೀರುಗಂಟಿ ಲಕ್ಷ್ಮೀಪುರ ಸರ್ಕಾರಿ ಪ್ರಾಥಮಿಕ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.