ರಾಮನಗರ: ತಾಲೂಕಿನ ಕೈಲಾಂಚ ಹೋಬಳಿಯ ದೇವರದೊಡ್ಡಿ ಗ್ರಾಮದ ಲಂಬಾಣಿ ಸಮುದಾಯದ ಮಹಿಳೆಯರೊಂದಿಗೆ ಶಾಸಕಿ ಅನಿತಾ ಕುಮಾರಸ್ವಾಮಿ ದೀಪಾವಳಿ ಹಬ್ಬವನ್ನು ಆಚರಿಸಿದರು.
ಗ್ರಾಮಕ್ಕೆ ಆಗಮಿಸಿದ ತಮ್ಮ ನೆಚ್ಚಿನ ನಾಯಕಿಗೆ ಹೆಣ್ಣು ಮಕ್ಕಳು, ಮಹಿಳೆಯರು ಕೈಯಲ್ಲಿ ದೀಪ ಹಿಡಿದು, ಆರತಿ ಬೆಳಗಿ, ಸ್ವಾಗತಿಸಿದರೆ, ಯುವಕರು ಪಟಾಕಿ ಸಿಡಿಸುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಗೋಪಾಲ ನಾಯಕ ಅವರ ಮನೆಗೆ ತೆರಳಿದ ಅನಿತಾ ಕುಮಾರಸ್ವಾಮಿ ಅವರಿಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ಫಲ ತಾಂಬೂಲ ನೀಡಿ ಅಭಿನಂದಿಸಿದರು. ನಂತರ ಲಂಬಾಣಿ ಮಹಿಳೆಯರು ಸಾಂಪ್ರದಾಯಿಕ ನೃತ್ಯದೊಂದಿಗೆ ಹಾಡು ಹೇಳುವ ಮೂಲಕ ಅನಿತಾ ಕುಮಾರಸ್ವಾಮಿ ಅವರಿಗೆ ಒಳಿತಾಗಲಿ ಎಂದು ತಾವು ನಂಬಿರುವ ದೇವರಲ್ಲಿ ಪ್ರಾರ್ಥಿಸಿದರು.
ಲಂಬಾಣಿ ಸಮುದಾಯದವರ ಪ್ರೀತಿ, ಅಭಿಮಾನಕ್ಕೆ ಮನಸೋತ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಮಹಿಳೆಯರೊಂದಿಗೆ ಬೆರೆತು, ತಾವು ಕೂಡ ಸಂಭ್ರಮಿಸಿದರು. ಮಕ್ಕಳಿಗೆ ಕಾಣಿಕೆ ನೀಡಿದರು.
ನಿಮ್ಮೊಂದಿಗೆ ಹಬ್ಬ ಆಚರಿಸಿರುವುದು ನನಗೆ ಅತೀವ ಸಂತಸವನ್ನುಂಟು ಮಾಡಿದೆ. ನಿಮ್ಮ ಪ್ರೀತಿ, ಅಭಿಮಾನಕ್ಕೆ ಹೃದಯ ತುಂಬಿ ಬಂದಿದೆ. ಅವರ ಸಂಪ್ರದಾಯವನ್ನು ಹತ್ತಿರದಿಂದ ನೋಡಿ ನಾನು ಪುಳಕಿತಳಾಗಿದ್ದೇನೆ ಎಂದು ಅನಿತಾ ಕುಮಾರಸ್ವಾಮಿ ಸಂತಸ ವ್ಯಕ್ತಪಡಿಸಿದರು.
ಹಿರಿಯರನ್ನು ನೆನೆದು, ಎಡೆ ಇಡುವುದು ಹಾಗೂ ವಿಶ್ವ ಕ್ಷೇಮಕ್ಕಾಗಿ ಹಾಡು, ನೃತ್ಯದ ಮೂಲಕ ತಮ್ಮ ದೇವರಿಗೆ ಮೊರೆ ಇಡುವುದು ಈ ಹಬ್ಬದ ವಿಶೇಷ.
ಇದನ್ನೂ ಓದಿ: ಸಿ.ಪಿ ಯೋಗೇಶ್ವರ್‌ಗೆ ನಮ್ಮ ಕಾರ್ಯಕರ್ತರು ತಕ್ಕ ಉತ್ತರ ನೀಡಿದ್ದಾರೆ: ಅನಿತಾ ಕುಮಾರಸ್ವಾಮಿ