ರಾಮನಗರ: ಮಂತ್ರಿ ಸ್ಥಾನಕ್ಕೆ ನಮ್ಮಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಆದರೆ, ಮಂತ್ರಿ ಸ್ಥಾನ ಕಡಿಮೆಯಿದೆ. ಹೀಗಾಗಿ, ಸ್ವಲ್ಪ ಅಸಮಾಧಾನ ಇದ್ದೆ ಇರುತ್ತೆ. ಮಂತ್ರಿಗಿರಿ ಸ್ಥಾನದಲ್ಲಿ ವಿಜಯೇಂದ್ರ ಅವರ ಹಸ್ತಕ್ಷೇಪ ಇಲ್ಲ. ಯತ್ನಾಳ್ ಹಿರಿಯ ನಾಯಕರು, ಹೈಕಮಾಂಡ್ ಎಲ್ಲ ಸಮಸ್ಯೆಯನ್ನು ಸರಿಪಡಿಸುತ್ತದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದರು.
ರಾಮನಗರದಲ್ಲಿ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಬಳಿಕ ಮಾತನಾಡಿದರು. ಬಿಜೆಪಿ ಸರ್ಕಾರ ಬಂದ ನಂತರ ಇಲಾಖೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಈಗಾಗಲೇ 15 ಜಿಲ್ಲೆಗಳಲ್ಲಿ ಪಶು ಸಂಜೀವಿನಿ ಯೋಜನೆ ಆರಂಭಿಸಲಾಗಿದೆ. 1962 ಡಯಲ್ ಮಾಡಿದರೆ, ನಮ್ಮ ಇಲಾಖೆ ಅಧಿಕಾರಿಗಳೇ ಮನೆ ಬಾಗಿಲಿಗೆ ಹೋಗಲಿದ್ದಾರೆ. ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಸೂಚಿಸಲಿದ್ದಾರೆ ಎಂದರು.
ನಮ್ಮ ದೇಶದಲ್ಲಿ ಗೋ ಮಾತೆಗೆ ಉತ್ತಮ ಸ್ಥಾನಮಾನ ಇದೆ. ಹೀಗಾಗಿ, ಗೋ ಹತ್ಯೆ ಕಾಯ್ದೆ ಜಾರಿಗೆ ತರಲಾಗಿದೆ. ಎಲ್ಲ ಸಚಿವರ ಒತ್ತಾಸೆ ಇದಾಗಿದೆ. ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆಯಾಗಿದ್ದು, ಗೋ ಸೇವಾ ಆಯೋಗ ಸ್ಥಾಪನೆಗೆ ಸಿದ್ದತೆ ನಡೆಯುತ್ತಿದೆ. ದೇಸಿ ತಳಿ ಉಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಶಿರಾದ ಇಪ್ಪತ್ತು ಎಕರೆ ಪ್ರದೇಶದಲ್ಲಿ ಮೇಕೆ ಮತ್ತು ಕುರಿ ವಧಾಲಯ ಮಾಡಲು ಸಿಎಂ ಸದ್ಯದಲ್ಲೇ ಚಾಲನೆ ನೀಡಲಿದ್ದಾರೆ ಎಂದರು.
ಎಫ್ಎಂಡಿ (ಲಸಿಕೆ) ಎಲ್ಲ ತಾಲೂಕಿನಲ್ಲಿಯೂ ಲಭ್ಯವಿದ್ದು, ಹಕ್ಕಿ ಜ್ವರ ಭೀತಿ ಸದ್ಯ ರಾಮನಗರ ಜಿಲ್ಲೆಯಲ್ಲಿಲ್ಲ. ಉತ್ತರ ಪ್ರದೇಶದ ಮಾದರಿಯಲ್ಲಿ ಮುಜರಾಯಿ ಇಲಾಖೆ ಸಂಘಟನೆಗಳ ಮೂಲಕ ಒಗ್ಗೂಡಿ ಕೆಲಸ ಮಾಡಲಾಗುವುದು. ರಾಜ್ಯದಲ್ಲಿ ಪಶು ಸಂಗೋಪನಾ ಇಲಾಖೆ ವೈದ್ಯರ ಕೊರತೆ ಹೆಚ್ಚಾಗಿದೆ. ಖಾಲಿ ಇರುವ ಹುದ್ದೆ ತುಂಬಲು ಸಿಎಂ ಬಳಿ ಮನವಿ ಮಾಡಲಾಗುತ್ತಿದೆ. ಪಶು ಸಹಾಯವಾಣಿ ಕೇಂದ್ರ ಸ್ಥಾಪನೆಗೆ ರಾಜ್ಯಮಟ್ಟದಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಇದಾದ ಬಳಿಕ ವಾರ್ ರೂಂ ಮಾದರಿಯಲ್ಲಿ ಯಾರು ಬೇಕಿದ್ದರೂ ಕರೆ ಮಾಡಿ, ಗೋ ಹತ್ಯೆ ನಿಷೇಧ ಕಾಯ್ದೆ ಜತೆಗೆ, ಇಡೀ ಇಲಾಖೆಯ ಬಗ್ಗೆ ಮಾಹಿತಿ ಪಡೆಯಬಹುದು. ಗೋ ಹತ್ಯೆ ನಿಷೇಧ ಕಾಯ್ದೆಯಿಂದಾಗಿ ಇನ್ನುಳಿದ ಮಾಂಸಗಳಿಗೆ ಹೆಚ್ಚಿನ ಬೇಡಿಕೆ ಇರಲಿದೆ. ಹೀಗಾಗಿ, ಕುರಿ, ಕೋಳಿಗಳ ಸಂಖ್ಯೆಯನ್ನು ಹೆಚ್ಚಿಸುವ ಅವಶ್ಯಕತೆ ಇದೆ ಎಂದರು.