ರಾಮನಗರ: ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಕಳೆದ ರಾತ್ರಿ 8 - 9 ಗಂಟೆಯ ಸುಮಾರಿಗೆ ಸುಮಾರು 17 ವರ್ಷದ ಬಾಲಕಿ ಮೇಲೆ 22 ವರ್ಷದ ಯುವಕನೊಬ್ಬ ಆ್ಯಸಿಡ್ ದಾಳಿ ನಡೆಸಿರುವ ಘಟನೆ ನಡೆದಿದೆ. ಅದು ಬಾಲಕಿ ಅವನ ಪ್ರೀತಿ ನಿರಾಕರಿಸಿದ್ದಕ್ಕೆ ಈ ಘಟನೆ ನಡೆದಿರುವುದು ದುರಂತ.
ಏನಿದು ಘಟನೆ?: ಬಂಧಿತ ಆರೋಪಿ ಸುಮಂತ್ ಎಂದು ಗುರುತಿಸಲಾಗಿದೆ. ಸುಮಂತ್ ಕಾರ್ ಮೆಕಾನಿಕ್ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಆತ ತಮ್ಮ ಗ್ಯಾರೇಜ್ ಬಳಿ ಇರುವ ಬಾಲಕಿಯನ್ನು ಪ್ರೀತಿಸುತ್ತಿದ್ದ. ಆ ಬಾಲಕಿ ಪ್ರತಿನಿತ್ಯ ಗ್ಯಾರೇಜ್ ಮುಂದಿನಿಂದಲೇ ಕಾಲೇಜ್ ಹೋಗಿ ಬರುತ್ತಿದ್ದಳು. ಇನ್ನು ಸುಮಂತ್ ಪ್ರತಿನಿತ್ಯ ಬಾಲಕಿ ಕಾಲೇಜ್ಗೆ ಹೋಗುವ ದಾರಿ ಮಧ್ಯ ಅಡ್ಡ ಹಾಕಿ ಪ್ರೀತಿಸುವಂತೆ ಪೀಡಿಸುತ್ತಿದ್ದನು. ಬಾಲಕಿ ಇವನ ಪ್ರೀತಿಯನ್ನು ನಿರಾಕರಿಸುತ್ತಲೇ ಬಂದಿದ್ದಾಳೆ. ಇದರ ಬಗ್ಗೆ ಸುಮಂತ್ ಬಹಳ ತಲೆಕೆಡಿಸಿಕೊಂಡಿದ್ದನು. ಕಳೆದ ದಿನ ರಾತ್ರಿ 8-9 ಗಂಟೆ ಸುಮಾರು ಕನಕಪುರ ತಾಲೂಕಿನ ಬೈಪಾಸ್ ರಸ್ತೆ ನಾರಾಯಣಪ್ಪ ಕೆರೆ ಬಳಿ ಬಾಲಕಿಯನ್ನು ಅಡ್ಡಗಟ್ಟಿ ಪ್ರೀತಿಸುವಂತೆ ಪೀಡಿಸಿದ್ದಾನೆ. ಬಾಲಕಿ ಸಹ ಅವನ ಪ್ರೀತಿಯನ್ನು ನಿರಾಕರಿಸಿದ್ದಾಳೆ. ಈ ವೇಳೆ ಸುಮಂತ್ ತಾನೂ ತಂದಿದ್ದ ಆ್ಯಸಿಡ್ ಅನ್ನು ಅವಳ ಮುಖದ ಮೇಲೆ ಎರಚಿ ಪರಾರಿಯಾಗಿದ್ದಾನೆ.
ಆ್ಯಸಿಡ್ ದಾಳಿಯಿಂದ ನರಳಾಡುತ್ತಿದ್ದ ಬಾಲಕಿಯನ್ನು ಸ್ಥಳೀಯ ಜನ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಆ್ಯಸಿಡ್ ದಾಳಿಯಿಂದ ಬಾಲಕಿಯ ಎಡ ಕಣ್ಣಿಗೆ ತೀವ್ರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ಮುಂದುವರಿದಿದ್ದು, ಕಣ್ಣು ಮತ್ತು ಆಕೆಯ ಸ್ಥಿತಿಯ ಬಗ್ಗೆ ವೈದ್ಯರು ಇನ್ನೂ ಯಾವುದೇ ವರದಿ ನೀಡಿಲ್ಲ.
ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪ್ರೀತಿ ನಿರಾಕರಿಸಿದ್ದಕ್ಕೆ ಅಪ್ರಾಪ್ತೆ ಮೇಲೆ ಆ್ಯಸಿಡ್ ದಾಳಿ ನಡೆಸಿದ ಆರೋಪಿ ಸುಮಂತ್ನನ್ನು ಬಂಧಿಸಿದರು. ಸ್ಥಳಕ್ಕೆ ಎಸ್ಪಿ ಕಾರ್ತಿಕ್ ರೆಡ್ಡಿ ಭೇಟಿ ಬಾಲಕಿಯ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ಘಟನೆ ನಡೆದು ಕೆಲ ಹೊತ್ತಿನಲ್ಲೆ ಆರೋಪಿಯನ್ನ ಬಂಧಿಸಿದ್ದಾರೆಂದು ತಿಳಿದು ಬಂದಿದೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.
ಓದಿ: ಸವದತ್ತಿ ಅಪಘಾತ ಸಂತ್ರಸ್ತರಿಗೆ ₹5 ಲಕ್ಷ ಪರಿಹಾರ; ಆ್ಯಸಿಡ್ ದಾಳಿಗೊಳಗಾದ ಪ್ರೇಮಾಗೆ ಉದ್ಯೋಗ ಭರವಸೆ
ಜಾಮೀನು ನಿರಾಕರಿಸಿದ ಹೈಕೋರ್ಟ್: ಈ ಹಿಂದೆ ಅಪ್ರಾಪ್ತೆಯೊಂದಿಗೆ ಪ್ರೀತಿ ನಿವೇದನೆ ಮಾಡಿಕೊಂಡು ಒಪ್ಪಿಕೊಳ್ಳದಿದ್ದಲ್ಲಿ ಮುಖಕ್ಕೆ ಆ್ಯಸಿಡ್ ಹಾಕುವುದಾಗಿ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಯವಕನೊಬ್ಬನಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿತ್ತು. ಅಪ್ರಾಪ್ತೆಗೆ ಬೆದರಿಕೆ ಹಾಕಿದ್ದ ಪ್ರಕರಣಲ್ಲಿ ಬಂಧನಕ್ಕೆ ಒಳಗಾಗಿರುವ ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಹೊಸಕಲ್‌ನಾಯಕನಕಹಳ್ಳಿ ನಿವಾಸಿ ಪವನ್ (26) ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ನ್ಯಾಯ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದ್ದು ಗಮನಾರ್ಹ..