ರಾಮನಗರ : ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಪಂ ಅಧ್ಯಕ್ಷೆಯ ಗಂಡ ನೇರವಾಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಚೋಳನಾಯಕನಹಳ್ಳಿ ಗ್ರಾಪಂ ಅಧ್ಯಕ್ಷೆ ಶ್ವೇತ ಅವರ ಪತಿ ಶಿವರಾಜ್‌ಕುಮಾರ್ ಎಸಿಬಿ ಬಲೆಗೆ ಬಿದ್ದವರು.
ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಗ್ರಾಮದ ನಿವಾಸಿಯೊಬ್ಬರು ಗಂಗೇನಹಳ್ಳಿ ಗ್ರಾಮದ ಸರ್ವೆ ನಂಬರ್‌ನಲ್ಲಿ 2 ಎಕರೆ 02 ಗುಂಟೆ ಜಮೀನು ವಾಣಿಜ್ಯ ಉದ್ದೇಶಕ್ಕಾಗಿ ಭೂಪರಿವರ್ತನೆ ಮಾಡಿಸಿದ್ದಾರೆ. ಸದರಿ ಜಮೀನಿನ ಇ-ಖಾತೆ ಮಾಡಿಸಲು ಚೋಳನಾಯಕನಹಳ್ಳಿ ಗ್ರಾಪಂಗೆ ಅರ್ಜಿ ಸಲ್ಲಿಸಿದ್ದರು.
ಇ-ಖಾತೆಗೆ ಅನುಮೋದನೆ ನೀಡಲು ಗ್ರಾಪಂ ಅಧ್ಯಕ್ಷೆ ಶ್ವೇತಾ ಹಾಗೂ ಅವರ ಗಂಡ ಶಿವರಾಜ್‌ಕುಮಾರ್ 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಂತೆಯೇ ಈ ಬಗ್ಗೆ ಎಸಿಬಿಗೆ ದೂರು ನೀಡಲಾಗಿತ್ತು. ಎಸಿಬಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಶಿವರಾಜ್‌ಕುಮಾರ್ ಮುಂಗಡವಾಗಿ 2 ಲಕ್ಷ ರೂ. ಲಂಚ ಹಣವನ್ನು ಪಡೆಯುವಾಗ ಸಿಕ್ಕಿಕೊಂಡಿದ್ದಾನೆ.
ರಾಮನಗರ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್‌ಪಿ ಗೋಪಾಲ ಡಿ ಜೋಗಿನ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ, ಲಂಚದ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳಾದ ಚೋಳನಾಯಕನಹಳ್ಳಿ ಗ್ರಾಪಂ ಅಧ್ಯಕ್ಷೆ ಶ್ವೇತಾ ಹಾಗೂ ಅವರ ಗಂಡ ಶಿವರಾಜ್‌ಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
(ಇದನ್ನೂ ಓದಿ: Omicron : ದ.ಕನ್ನಡದ 5 ಮಂದಿ ಸೇರಿ 14ಕ್ಕೆ ಏರಿದ ಒಮಿಕ್ರಾನ್ ಸೋಂಕಿತರ ಸಂಖ್ಯೆ..)