ರಾಮನಗರ: ಜ್ಯೂಸ್ ಎಂದು ಕೀಟನಾಶಕ ಸೇವಿಸಿ ಎರಡು ವರ್ಷದ ಮಗು ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಜರುಗಿದೆ. ಯಶಾಂಕ್.ಕೆ.ಗೌಡ ಎಂಬ ಮಗು ರೇಷ್ಮೆ ಹುಳುವಿನ ಮನೆಗೆ ಸಿಂಪಡಿಸಿಲು ಮನೆಯಲ್ಲಿ ಇರಿಸಿದ್ದ ದ್ರಾವಕವನ್ನು ಜ್ಯೂಸ್ ಎಂದು ಸೇವಿಸಿದ್ದು, ಅಸ್ವಸ್ಥಗೊಂಡ ಮಗುವನ್ನು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ. ಸ್ಥಳದಲ್ಲಿ ಮೃತ ಮಗುವಿನ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು, ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಡ್ರೈನ್ ಕ್ಲೀನರ್ ಸೇವಿಸಿ ಮಕ್ಕಳು ಅಸ್ವಸ್ಥ: ಮನೆ ಬಳಿ ಆಟವಾಡುತ್ತಿದ್ದ ಮೂವರು ಮಕ್ಕಳು ರಸ್ತೆ ಬದಿ ಬಿದ್ದಿದ್ದ ವಿಷಕಾರಿ ಡ್ರೈನ್ ಕ್ಲೀನರ್ ಸೇವಿಸಿ ಅಸ್ವಸ್ಥಗೊಂಡು ಘಟನೆ ದೇವನಹಳ್ಳಿ ಪಟ್ಟಣದ ವಿನಾಯಕ ನಗರದಲ್ಲಿ ಸೆ.2 ರಂದು ನಡೆದಿತ್ತು. ಅಸ್ವಸ್ಥ ಮಕ್ಕಳನ್ನು ಸುಚಿತ್ರಾ, ವೇದಾಂತ್ ಲೋಹಿತ್ಯಾ ಎಂದು ಗುರುತಿಸಲಾಗಿತ್ತು. ಘಟನೆ ಬಳಿಕ ಕೂಡಲೇ ಮಕ್ಕಳನ್ನು ದೇವನಹಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಸ್ವಸ್ಥ ಮಕ್ಕಳ ಪಾಲಕರು ಕೂಲಿ ಕಾರ್ಮಿಕರಾಗಿದ್ದು, ಕೆಲಸಕ್ಕೆಂದು ಬೆಳಗ್ಗೆ ಮನೆಯಿಂದ ತೆರಳಿದ್ದರು. ಮನೆಮುಂದೆ ಆಟವಡುತ್ತಿದ್ದ ಮಕ್ಕಳಿಗೆ ರಸ್ತೆಯಲ್ಲಿ ಬಿದ್ದಿದ್ದ ವಿಷಕಾರಿ ಡ್ರೈನ್ ಕ್ಲೀನರ್ ಸಿಕ್ಕಿದೆ. ತಿನ್ನುವ ಪದಾರ್ಥ ಎಂದು ಭಾವಿಸಿ ಅದನ್ನು ಮೂವರು ಸೇವಿಸಿ ರಕ್ತವಾಂತಿ ಮಾಡಿದ್ದರು. ಬಳಿಕ ಈ ಮಕ್ಕಳನ್ನು ದೇವನಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಥಳಕ್ಕೆ ದೇವನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ರಸ್ತೆಯ ಬದಿ ಕ್ಲೀನರ್ ಎಸೆದಿರುವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
ಡಬ್ಬಿ ನುಂಗಿ ಮಗು ಸಾವು: ನೋವು ನಿವಾರಕ ಮೆಂಥೋಪ್ಲಸ್ ಡಬ್ಬಿ ನುಂಗಿ 9 ತಿಂಗಳು ಮಗು ಮೃತಪಟ್ಟ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ಹಲವು ತಿಂಗಳುಗಳ ಹಿಂದೆ ನಡೆದಿತ್ತು. ಮುತ್ಯಾಲ ರಾಘವೇಂದ್ರ ಮತ್ತು ತುಳಸಿ ದಂಪತಿಯ ಹೆಣ್ಣು ಮಗು ಆಟವಾಡುತ್ತಿದ್ದ ವೇಳೆ ಮನೆಯಲ್ಲಿ ಸಿಕ್ಕಿದ್ದ ಮೆಂಥೋಪ್ಲಸ್ ಡಬ್ಬಿ ನುಂಗಿತ್ತು. ಬಳಿಕ ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಡಬ್ಬಿ ನುಂಗಿರುವುದು ಪತ್ತೆಯಾಗಿತ್ತು. ಕೂಡಲೇ ತಾಯಿ ತುಳಸಿ ಮಗುವನ್ನು ವೈದ್ಯರ ಬಳಿ ಕರೆದೊಯ್ದಿದ್ದರೂ ಪ್ರಯೋಜನವಾಗದೇ ಮಾರ್ಗ ಮಧ್ಯೆಯೇ ಮಗು ಮೃತಪಟ್ಟಿತ್ತು. ರಾಘವೇಂದ್ರ ಮತ್ತು ತುಳಸಿ ದಂಪತಿಗೆ ಮದುವೆಯಾದ 10 ವರ್ಷದ ಬಳಿಕ ಈ ಮಗು ಜನಿಸಿತ್ತು.
ಇದನ್ನೂ ಓದಿ: ಮೊಬೈಲ್ ಚಾರ್ಜರ್ ಬಾಯಿಗೆ ಇಟ್ಟುಕೊಂಡಾಗ ವಿದ್ಯುತ್ ಪ್ರವಹಿಸಿ ಮಗು ಸಾವು: ಮಕ್ಕಳ ಬಗ್ಗೆ ಗಮನವಿರಲೆಂದು ವೈದ್ಯರ ಸಲಹೆ